ದೇಶ

ಮಧ್ಯಪ್ರದೇಶ, ರಾಜಸ್ಥಾನ: ಕೊನೆಗೂ ಮಾಯಾವತಿ ಬೆದರಿಕೆಗೆ ಮಂಡಿಯೂರಿದ ಕಾಂಗ್ರೆಸ್!

Srinivas Rao BV
ಭೋಪಾಲ್: ಮಧ್ಯಪ್ರದೇಶ, ರಾಜಸ್ಥಾನಗಳಲ್ಲಿ ಮಾಯಾವತಿ ಬೆಂಬಲ ವಾಪಸ್ ಪಡೆಯುವ ಬೆದರಿಕೆಗೆ ಬಗ್ಗಿರುವ ಕಾಂಗ್ರೆಸ್ ದಲಿತರ ಮೇಲಿನ ಪ್ರಕರಣಗಳನ್ನು ವಾಪಸ್ ಪಡೆಯಲು ನಿರ್ಧರಿಸಿದೆ. 
ಕಳೆದ ವರ್ಷ ದಲಿತ ಸಂಘಟನೆಗಳು ಭಾರತ್ ಬಂದ್ ವೇಳೆ ನಡೆದಿದ್ದ ಹಿಂಸಾಚಾರ ಪ್ರಕರಣದಲ್ಲಿ ದಲಿತರ ಮೇಲೆ ಕೇಸ್ ದಾಖಲಿಸಲಾಗಿತ್ತು. ಈ ಪ್ರಕರಣಗಳನ್ನು ವಾಪಸ್ ಪಡೆಯುವಂತೆ ಮಾಯಾವತಿ ಕಾಂಗ್ರೆಸ್ ಮೇಲೆ ಒತ್ತಡ ಹೇರಿದ್ದರು. ಅಷ್ಟೇ ಅಲ್ಲದೇ ಕಾಂಗ್ರೆಸ್ ಸರ್ಕಾರಕ್ಕೆ ನೀಡಿರುವ ಬೆಂಬಲವನ್ನು ವಾಪಸ್ ಪಡೆಯುವ ಬಗ್ಗೆಯೂ ಎಚ್ಚರಿಕೆ ನೀಡಿದ್ದರು. 
ಈ ಹಿನ್ನೆಲೆಯಲ್ಲಿ ಮಾಯಾವತಿ ಒತ್ತಡಕ್ಕೆ ಮಣಿದಿರುವ ಕಾಂಗ್ರೆಸ್, ಕೊನೆಗೂ ದಲಿತರ ಮೇಲಿನ ಪ್ರಕರಣಗಳನ್ನು ಹಿಂಪಡೆಯುವುದಕ್ಕೆ ನಿರ್ಧರಿಸಿದೆ. ಈ ಬಗ್ಗೆ ಮಧ್ಯಪ್ರದೇಶ ಕಾನೂನು ಸಚಿವ ಪಿಸಿ ಶರ್ಮಾ ಮಾಹಿತಿ ನೀಡಿದ್ದು, ದಲಿತರ ಮೇಲೆ ಈ ಹಿಂದಿನ ಬಿಜೆಪಿ ಸರ್ಕಾರ ದಾಖಲಿಸಿದ್ದ ಎಲ್ಲಾ ರಾಜಕೀಯ ಪ್ರಕರಣಗಳನ್ನೂ ವಾಪಸ್ ಪಡೆಯುತ್ತೇವೆ ಎಂದು ಹೇಳಿದ್ದಾರೆ. 
ಬಿಜೆಪಿ ವಿರುದ್ಧ ಕಾಂಗ್ರೆಸ್ ಹೋರಾಟ ನಡೆಸುತ್ತಿದೆ. ಬಿಜೆಪಿ ಸರ್ಕಾರದ ವಿರುದ್ಧ ಯಾರೇ ಪ್ರತಿಭಟನೆ, ಹೋರಾಟ ನಡೆಸುತ್ತಿದ್ದರೂ ಸಹ ಪಕ್ಷಾತೀತಾವಾಗಿ ಅವರ ವಿರುದ್ಧದ ಪ್ರಕರಣಗಳನ್ನು ವಾಪಸ್ ಪಡೆಯಲಾಗುವುದು ಎಂದು ಪಿಸಿ ಶರ್ಮಾ ಮಾಹಿತಿ ನೀಡಿದ್ದಾರೆ. 
ಇನ್ನು ರಾಜಸ್ಥಾನದಲ್ಲೂ ಪ್ರಕರಣಗಳನ್ನು ವಾಪಸ್ ಪಡೆಯುವುದರ ಬಗ್ಗೆ ಅಲ್ಲಿನ ಸಿಎಂ ಅಶೋಕ್ ಗೆಹ್ಲೋಟ್ ಘೋಷಣೆ ಮಾಡಿದ್ದು, 2017 ರ ಏಪ್ರಿಲ್ ನಲ್ಲಿ ದಾಖಲಾದ ದಲಿತರ ವಿರುದ್ಧದ ಪ್ರಕರಣಗಳನ್ನು ವಾಪಸ್ ಪಡೆಯುವುದಾಗಿ ಹೇಳಿದ್ದಾರೆ. 
SCROLL FOR NEXT