ದೇಶ

ಮೇಕೆದಾಟು: ಲೋಕಸಭೆಯಲ್ಲಿ ಎಐಎಡಿಎಂಕೆ ಪುಂಡಾಟ, 26 ಸಂಸದರ ಅಮಾನತು!

Vishwanath S
ನವದೆಹಲಿ: ಮೇಕೆದಾಟು ಯೋಜನೆಯನ್ನು ವಿರೋಧಿಸಿ ಎಐಎಡಿಎಂಕೆ ಸದಸ್ಯರು ಲೋಕಸಭೆಯಲ್ಲಿ ಪುಂಡಾಟ ನಡೆಸಿದ್ದು ಇದರಿಂದ ಕೆರಳಿದ ಸ್ಪಿಕರ್ ಸುಮಿತ್ರಾ ಮಹಾಜನ್ ಅವರು 26 ಸಂಸದರನ್ನು ಅಮಾನತು ಮಾಡಿದ್ದಾರೆ. 
ಮೇಕೆದಾಟುವಿನಲ್ಲಿ ಜಲಾಶಯ ನಿರ್ಮಾಣಕ್ಕೆ ಕರ್ನಾಟಕಕ್ಕೆ ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್ ಕೊಟ್ಟಿತ್ತು. ಇದನ್ನು ಸಹಿಸದ ತಮಿಳುನಾಡು ಸರ್ಕಾರ ಕ್ಯಾತೆ ತೆಗೆಯುತ್ತಿತ್ತು. ಇಂದು ನಡೆದ ಲೋಕಸಭೆ ಕಲಾಪದ ಸಮಯದಲ್ಲಿ ಎಐಎಡಿಎಂಕೆ ಪಕ್ಷದ 26 ಸಂಸದರು ಗಲಾಟೆ ಮಾಡಿದ್ದರು. ಈ ವೇಳೆ ಸ್ಪಿಕರ್ ಸುಮಿತ್ರ ಮಹಾಜನ್ ಅವರು ಸಂಸತ್ ಕಲಾಪಕ್ಕೆ ಅಡ್ಡಿ ಪಡಿಸಿದ ಆರೋಪದ ಹಿನ್ನೆಲೆಯಲ್ಲಿ 26 ಸಂಸದರನ್ನು ಅಮಾನತು ಮಾಡಿದ್ದಾರೆ. 
ಸ್ಪಿಕರ್ ಅವರು ಎಐಎಡಿಎಂಕೆ 26 ಸಂಸದರನ್ನು ಮುಂದಿನ 5 ಕಲಾಪಗಳಿಗೆ ಹಾಜರಾಗದಂತೆ ಅಮಾನತು ಮಾಡಿದ್ದಾರೆ. ಇನ್ನು ಎಐಎಡಿಎಂಕೆ ಸಂಸದರನ್ನು ಅಮಾನತು ಮಾಡಿರುವುದಕ್ಕೆ ಪ್ರತಿಕ್ರಿಯಿಸಿರುವ ಎಐಎಡಿಎಂಕೆ ಸಂಸದ ಮತ್ತು ಲೋಕಸಭೆ ಡೆಪ್ಯುಟಿ ಸ್ಪಿಕರ್ ಎಂ ತಂಬಿದೊರೈ ಅವರು, ಸದ್ಯದಲ್ಲೇ ಲೋಕಸಭೆ ಚುನಾವಣೆ ಬರುತ್ತಿದ್ದು ಈ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಸಲುವಾಗಿ ಕೇಂದ್ರ ಸರ್ಕಾರ ಮೇಕೆದಾಟು ಯೋಜನೆಗೆ ಗ್ರೀನ್ ಸಿಗ್ನಲ್ ಕೊಟ್ಟಿದೆ. 
ಈ ಯೋಜನೆಗೆ ವಿರೋಧ ವ್ಯಕ್ತಪಡಿಸಿ ನಾವು ಪ್ರತಿಭಟನೆಗಳನ್ನು ನಡೆಸುತ್ತಿದ್ದೇವೆ. ಪ್ರತಿಭಟನೆಯು ನಮ್ಮ ಪ್ರಜಾಪ್ರಭುತ್ವ ಹಕ್ಕು. ಆದರೆ ಕೇಂದ್ರ ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಬರುತ್ತಿಲ್ಲ ಎಂದು ತಂಬಿದೊರೈ ಹೇಳಿದ್ದಾರೆ.
SCROLL FOR NEXT