ದೇಶ

ಸಂಸತ್ತಿನಲ್ಲಿ ರಫೇಲ್ ಗದ್ದಲ: ಚರ್ಚೆ ವೇಳೆ ಕಾಂಗ್ರೆಸ್ ಸಂಸದ 'ಪೇಪರ್ ವಿಮಾನ' ಎಸೆದಿದ್ದೇಕೆ?

Manjula VN
ನವದೆಹಲಿ: ಸಂಸತ್ತಿನಲ್ಲಿ ರಫೇಲ್ ಯುದ್ಧ ವಿಮಾನ ಖರೀದಿ ಒಪ್ಪಂದ ಕುರಿತು ಕೇಂದ್ರದ ಆಡಳಿತಾರೂಢ ಎನ್'ಡಿಎ ಸರ್ಕಾರ ಹಾಗೂ ವಿರೋಧ ಪಕ್ಷಗಳ ನಡುವೆ ಚರ್ಚೆ ನಡೆಯುತ್ತಿದ್ದ ಸಂದರ್ಭದಲ್ಲಿ ಸಂಸದರೊಬ್ಬರು ಪೇಪರ್ ವಿಮಾನಗಳನ್ನು ಎಸೆದು ಕುಚೇಷ್ಟೆ ಪ್ರದರ್ಶಿಸಿದ್ದಾರೆ. 
ರಫೇಲ್ ಒಪ್ಪಂದ ಕುರಿತಾದ ಆರೋಪ-ಪ್ರತ್ಯಾರೋಪಗಳಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ವಾಗ್ದಾಳಿ ನಡೆಸಿದವು. ಸುಪ್ರೀಂಕೋರ್ಟ್ ತೀರ್ಪಿನ ಬಳಿಕ ಸಂಸತ್ತಿನಲ್ಲಿ ಇಂದು ಕಾಂಗ್ರೆಸ್, ರಫೇಲ್ ಒಪ್ಪಂದ ಕುರಿತು ಚರ್ಚೆ ಆರಂಭಿಸಿತ್ತು. 
ಚರ್ಚೆಯಲ್ಲಿ ರಾಹುಲ್ ಗಾಂಧಿಯವರು ಭಾಗಿಯಾಗಿದ್ದರು. ಈ ಹಿಂದೆ ಸಂಸತ್ತಿನಲ್ಲಿ ಮಾಡಿದ್ದ ಆರೋಪಗಳನ್ನೇ ಇಂದೂ ಕೂಡ ರಾಹುಲ್ ಮಾಡಿದರು. ಇದಕ್ಕೆ ಜೇಟ್ಲಿಯವರು ತಿರುಗೇಟು ನೀಡಿದ್ದರು. 
ಚರ್ಚೆ ವೇಳೆ ಪಂಜಾಬ್ ಕಾಂಗ್ರೆಸ್ ಸಂಸದ ಗುರ್ಜೀತ್ ಸಿಂಗ್ ಅವುಜ್ಲಾ ಅವರು ಪೇಪರ್ ವಿಮಾನಗಳನ್ನು ಜೇಟ್ಲಿಯತ್ತ ಎಸೆದಿದ್ದಾರೆ. 
ಅವುಜ್ಲಾ ಅವರ ಅನುಚಿತ ವರ್ತನೆಯನ್ನು ಖಂಡಿಸಿದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೂಡಲೇ ಲೋಕಸಭೆ ಸ್ಪೀಕರ್ ಬಳಿ ದೂರು ನೀಡಿದ್ದಾರೆ. 
ಪೇಪರ್ ವಿಮಾನ ಎಸೆದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವುಜ್ಲಾ ಅವರು, ಚರ್ಚೆ ರಫೇಲ್ ಖರೀದಿ ಒಪ್ಪಂದ ಕುರಿತಂತೆ ನಡೆಯಬೇಕಿತ್ತು. ನಾಯಕರು ರಫೇಲ್ ಒಪ್ಪಂದ ಕುರಿತಂತೆಯೇ ಮಾತನಾಡಬೇಕಿತ್ತು. ಆದರೆ ಬೋಫೋರ್ಸ್, ಅಗಸ್ಟಾವೆಸ್ಟ್ ಲ್ಯಾಂಡ್ ಮತ್ತು ನ್ಯಾಷನಲ್ ಹೆರಾಲ್ಡ್ ಬಗ್ಗೆ ಮಾತುಕತೆ ಆರಂಭವಾಗಿತ್ತು. ಹೀಗಾಗಿ ನಾವು ಪೇಪರ್ ವಿಮಾನಗಳನ್ನು ಎಸೆದೆವು. ರಫೇಲ್ ವಿವಾದ ಸಂಬಂಧ ಸಂಸದೀಯ ಜಂಟಿ ಸಮಿತಿ ತನಿಖೆಯ ಅಗತ್ಯವಿದೆ ಎಂದು ಹೇಳಿದ್ದಾರೆ. 
SCROLL FOR NEXT