ಕಾಶ್ಮೀರ: ಯೋಧರ ಮೇಲೆ ದಾಳಿಗೆ ಹೊಂಚು ಹಾಕಿರುವ ಉಗ್ರರಿಗೆ ಪಾಕಿಸ್ತಾನದ ಕುಮ್ಮಕ್ಕು
ನವದೆಹಲಿ: ಜಮ್ಮು-ಕಾಶ್ಮೀರದಲ್ಲಿ ಭದ್ರತಾ ಸಿಬ್ಬಂದಿಗಳ ಮೇಲೆ ದಾಳಿ ನಡೆಸಲು ಪಾಕಿಸ್ತಾನದ ಐಎಸ್ಐ ಜೈಶ್-ಎ-ಮೊಹಮ್ಮದ್ ಉಗ್ರ ಸಂಘಟನೆಯ ಉಗ್ರರನ್ನು ಕಳಿಸಿದೆ ಎಂಬ ಆಘಾತಕಾರಿ ಮಾಹಿತಿ ಗುಪ್ತಚರ ಇಲಾಖೆ ಮೂಲಕ ಬಹಿರಂಗಗೊಂಡಿದೆ.
ಜೆಇಎಂ ನ ಮುಖ್ಯಸ್ಥ ಮಸೂದ್ ಅಜರ್ ನ ಸಹಚರ ಅಬ್ದುಲ್ ರಶೀದ್ ಗಾಝಿಯನ್ನು ಭಾರತಕ್ಕೆ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐ ಭಾರತಕ್ಕೆ ಕಳಿಸಿದೆ ಎಂದು ಹೇಳಲಾಗುತ್ತಿದ್ದು ಗುಪ್ತಚರ ಇಲಾಖೆ ಪ್ರಕಾರ, 2018 ರ ಡಿಸೆಂಬರ್ ನಲ್ಲೇ ಉಗ್ರರು ಭಾರತ ಪ್ರವೇಶಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಜಮ್ಮು-ಕಾಶ್ಮೀರದಲಿ ಭದ್ರತಾ ಸಿಬ್ಬಂದಿಗಳ ಮೇಲೆ ದಾಳಿ ನಡೆಸಲು ಅಬ್ದುಲ್ ರಶೀದ್ ಗಾಝಿಗೆ ಅಫ್ಘಾನಿಸ್ಥಾನದಲ್ಲಿತರಬೇತಿ ನೀಡಲಾಗಿದ್ದು ದಾಳಿ ನಡೆಸಲು ಹೊಸ ಉಗ್ರರನ್ನು ನೇಮಕ ಮಾಡಿಕೊಳ್ಳುವುದಕ್ಕೆ ಆತನಿಗೆ ಪಾಕಿಸ್ತಾನದ ಐಎಸ್ಐ ಸೂಚಿಸಿದೆ. ಈ ಪ್ರಕಾರ ರಶೀದ್ ಗಾಝಿ ತಾಲೀಬಾನ್ ಜೊತೆ ಕೈ ಜೋಡಿಸಿದ್ದು, ಭಾರತೀಯ ಪಡೆಗಳ ಮೇಲೆ ದಾಳಿ ನಡೆಸಲು ಹೊಂಚು ಹಾಕುತ್ತಿದ್ದಾನೆ ಎಂದು ತಿಳಿದುಬಂದಿದೆ.
ಏನೇ ಆದರೂ ಭಾರತೀಯ ಸೇನೆ ಬಂದೂಕು ಹಿಡಿದು ಬಂದರೆ... ಎಂಬ ಭಯ ಭಯೋತ್ಪಾದಕರಲ್ಲೂ ಕಾಡುತ್ತಿರುವುದು ಒಂದೆಡೆಯಾದರೆ ಶಸ್ತ್ರಾಸ್ತ್ರಗಳ ಕೊರತೆಯೂ ಒಂದೆಡೆಯಾಗಿದೆ. ಈ ಹಿನ್ನೆಲೆಯಲ್ಲಿ ಭಯೋತ್ಪಾದಕರು ಭದ್ರತಾ ಸಿಬ್ಬಂದಿಗಳ ಬಳಿ ಇರುವ ಶಸ್ತ್ರಾಸ್ತ್ರಗಳನ್ನೇ ಹೊತ್ತೊಯ್ಯುವುದಕ್ಕೆ ಸ್ಕೆಚ್ ಹಾಕಿದ್ದಾರೆ ಎಂದೂ ಹೇಳಲಾಗಿದೆ.
ಇನ್ನು ಭಾರತದ ವಿರುದ್ಧ ಪಾಕಿಸ್ತಾನದ ಉಗ್ರರು ಕಡಲ ಮೂಲಕ ಜಿಹಾದ್ ನಡೆಸುವ ಯೋಜನೆಯನ್ನೂ ಹೊಂದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಒಟ್ಟಾರೆ ಗಡಿಯಲ್ಲಿ ದಾಳಿ ನಡೆಸಲು ಸಿದ್ಧತೆ ನಡೆಸುತ್ತಿರುವ ಭಯೋತ್ಪಾದಕರನ್ನು ಮಟ್ಟ ಹಾಕಲು ಸೇನೆಯೂ ಸರ್ವಸನ್ನದ್ಧಗೊಂಡಿದೆ.