ದೇಶ

ಅಯ್ಯಪ್ಪ ದರ್ಶನಕ್ಕೆ ತೆರಳಿದ್ದೆ, ಆದರೆ ಪೊಲೀಸರು ನನಗೆ ಅವಕಾಶ ನೀಡಲಿಲ್ಲ: ಶ್ರೀಲಂಕಾ ಮಹಿಳೆ ಸ್ಪಷ್ಟನೆ

Srinivasamurthy VN
ಕೊಚ್ಚಿ: ವಿಶ್ವವಿಖ್ಯಾತ ಪವಿತ್ರ ಯಾತ್ರಾ ತಾಣ ಶಬರಿಮಲೆ ಸ್ವಾಮಿ ಅಯ್ಯಪ್ಪ ಸನ್ನಿಧಾನಕ್ಕೆ ತೆರಳಿ ಶ್ರೀಲಂಕಾ ಮೂಲದ 46 ವರ್ಷದ ಮಹಿಳೆಯೊಬ್ಬರು ದರ್ಶನ ಪಡೆದಿದ್ದಾರೆ ಎಂಬ ಸುದ್ದಿ ವೈರಲ್ ಆಗುತ್ತಿರುವ ಬೆನ್ನಲ್ಲೇ ಸ್ವತಃ ಮಹಿಳೆಯೇ ತಾನು ಅಯ್ಯಪ್ಪ ಸ್ವಾಮಿ ದರ್ಶನ ಪಡೆದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಶ್ರೀಲಂಕಾ ಮೂಲದ ಸುಮಾರು 46 ವರ್ಷದ ಮಹಿಳೆ ಶಶಿಕಲಾ ಎಂಬುವವರು ಈ ಬಗ್ಗೆ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದ್ದು, 'ದೇಗುಲ ಪ್ರವೇಶಿಲು ನಾನು ಪ್ರಯತ್ನಿಸಿದ್ದೆ, ಆದರೆ ಕೇರಳ ಪೊಲೀಸರು ನನಗೆ ಅವಕಾಶವನ್ನೇ ನೀಡಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಂಪಾ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿರುವ ಶಶಿಕಲಾ, 'ನನ್ನನ್ನು ಪೊಲೀಸರು ತಡೆದು ಹಿಂದಕ್ಕೆ ಕಳುಹಿಸಿದ್ದಾರೆ. ನಾನು ಅಯ್ಯಪ್ಪನ ನಿಜವಾದ ಭಕ್ತೆ. 48 ದಿನ ಮಾಲೆ ಧರಿಸಿ ದೇವರನ್ನು ಆರಾಧಿಸಿದ್ದೇನೆ. ನಾನು ಯಾರಿಗೂ ಭಯಪಡಲಾರೆ. ಅವರೇಕೆ ನನ್ನನ್ನು ತಡೆಯಬೇಕು. ನನ್ನ ಬಳಿ ವೈದ್ಯಕೀಯ ದಾಖಲೆಗಳಿವೆ. 48 ವರ್ಷ ಪೂರೈಸಿರುವ ನನ್ನ ಗರ್ಭಕೋಶವನ್ನು ಕಾರಣಾಂತರಗಳಿಂದ ಶಸ್ತ್ರಚಿಕಿತ್ಸೆ ಮಾಡಿ ತೆಗೆದು ಹಾಕಲಾಗಿದೆ. ಈ ಬಗ್ಗೆ ನಾನು ವೈದ್ಯಕೀಯ ದಾಖಲೆ ಹೊಂದಿದ್ದೇನೆ. ಆದರೂ ನನ್ನನ್ನು ದೇವರ ದರ್ಶನಕ್ಕೆ ಬಿಡಲಿಲ್ಲ' ಎಂದು ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. 
ಈ ಬಗ್ಗೆ ಮಾತನಾಡಿರುವ ಶಶಿಕಲಾ ಪತಿ, ದೇಗುಲಕ್ಕೆ ಇನ್ನು ಒಂದು ಕಿಲೋಮೀಟರ್​ ಇರುವಾಗಲೇ ಮರಕೂಟಮ್​ ಎಂಬಲ್ಲಿ ನಮ್ಮನ್ನು ತಡೆಯಲಾಯಿತು. ಹೀಗಾಗಿ ನಾನು ನನ್ನ ಮಗ ಮಾತ್ರ ದರ್ಶನ ಪಡೆದೆವು. ಶಶಿಕಲಾ ಹಿಂದಕ್ಕೆ ಹೋದರು ಎಂದು ಅವರು ಹೇಳಿದರು. 
ಶಂಕೆ ಮೂಡಿಸಿದ ಪೊಲೀಸರ ನಡೆ
ಇದಕ್ಕೂ ಮೊದಲು ಮಹಿಳೆ ದೇಗುಲ ಪ್ರವೇಶಿಸಿ ದೇವರ ದರ್ಶನ ಪಡೆದ ಬಗ್ಗೆ ಪೊಲೀಸರೇ ಮಾಧ್ಯಮಗಳಿಗೆ ಖಚಿತಪಡಿಸಿದ್ದರು. ಆದರೆ, ಮಹಿಳೆ ಅದನ್ನು ನಿರಾಕರಿಸಿದ್ದು ಹಲವು ಅನುಮಾನಗಳು ಏಳುವಂತೆ ಮಾಡಿದೆ. ಪೊಲೀಸರ ತದ್ವಿರುದ್ಧದ ಹೇಳಿಕೆಗಳು ಶಂಕೆಗೆ ಕಾರಣವಾಗಿದೆ. ಮಹಿಳೆಯರ ಪ್ರವೇಶ ವಿಚಾರವಾಗಿ ಈಗಾಗಲೇ ಕೇರಳ ಕುದಿಯುತ್ತಿದ್ದು, ಇದೀಗ ಮತ್ತೋರ್ವ ಮಹಿಳೆಯ ದರ್ಶನ ವಿಚಾರ ಮತ್ತಷ್ಟು ಸಮಸ್ಯೆ ತಂದೊಡ್ಡಬಹುದು ಎಂಬ ಶಂಕೆ ಮೇರೆಗೆ ಪೊಲೀಸರು ಗೊಂದಲದ ಹೇಳಿಕೆಗಳನ್ನು ನೀಡುತ್ತಿದ್ದಾರೆಯೇ ಎಂದು ಶಂಕಿಸಲಾಗುತ್ತಿದೆ.
SCROLL FOR NEXT