ದೇಶ

ಭಾರತದ ಪ್ರಧಾನಿ ಬಗ್ಗೆ ಹಗುರ ಮಾತು ಬೇಡ: ಮೋದಿ ಗೇಲಿ ಮಾಡಿದ ಟ್ರಂಪ್ ಗೆ ಕಾಂಗ್ರೆಸ್ ತಪರಾಕಿ!

Srinivasamurthy VN
ನವದೆಹಲಿ: ನೆರೆಯ ಆಫ್ಧಾನಿಸ್ತಾನದಲ್ಲಿ ಗ್ರಂಥಾಲಯ ನಿರ್ಮಾಣಕ್ಕೆ ಆರ್ಥಿಕ ನೆರವು ನೀಡಿರುವ ಪ್ರಧಾನ ಮೋದಿ ಕಾರ್ಯಕ್ಕೆ ಕಿಡಿಕಾರಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಕಾಂಗ್ರೆಸ್ ತಿರುಗಿ ಬಿದ್ದಿದ್ದು, ಭಾರತದ ಪ್ರಧಾನಿಗಳ  ಬಗ್ಗೆ ಮಾತನಾಡುವಾಗ ಎಚ್ಚರವಿರಲಿ ಎಂದು ಎಚ್ಚರಿಕೆ ನೀಡಿದೆ.
ಭಾರತವು ಯುದ್ಧ ಪೀಡಿತ ಆಫ್ಘಾನ್‌ನಲ್ಲಿ ಲೈಬ್ರರಿ ಸ್ಥಾಪಿಸಲು ನೆರವು ನೀಡಿದೆ. ಇದರಿಂದ ಆ ದೇಶಕ್ಕೆ ಯಾವುದೇ ಪ್ರಯೋಜನವಿಲ್ಲ. ಭಾರತ ಸೇರಿದಂತೆ ಹಲವು ದೇಶಗಳು ಆಫ್ಘಾನ್‌ನ ಭದ್ರತೆ ದೃಷ್ಟಿಯಿಂದ ಯಾವ ಕೆಲಸವನ್ನೂ ಮಾಡುತ್ತಿಲ್ಲ ಎಂದು ಟ್ರಂಪ್‌ ಟೀಕಿಸಿದ್ದಾರೆ. ಟ್ರಂಪ್ ಹೇಳಿಕೆಗೆ ಇದೀಗ ದೇಶಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದ್ದು, ಪಕ್ಷಭೇದ ಮರೆದು ಭಾರತೀಯ ರಾಜಕೀಯ ಪಕ್ಷಗಳು ತಕ್ಕ ಪ್ರತ್ಯುತ್ತರ ನೀಡಿವೆ. ಪ್ರಮುಖವಾಗಿ ಹಲವು ವಿಚಾರಗಳಲ್ಲಿ ಪ್ರಧಾನಿ ಮೋದಿ ವಿರುದ್ಧ ನಿಂತಿರುವ ಪ್ರತಿಪಕ್ಷ ಕಾಂಗ್ರೆಸ್ ಕೂಡ ಇದೀಗ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಬೆನ್ನಿಗೆ ನಿಂತಿದೆ. 
ಆಫ್ಗಾನಿಸ್ತಾನ ವಿಚಾರವಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಮಾಡಿರುವ ಟೀಕಿಯನ್ನು ಒಪ್ಪಲಾಗದು. ಅವರು ಮಾತನಾಡುತ್ತಿರುವುದು ಭಾರತ ದೇಶದ ಪ್ರಧಾನಮಂತ್ರಿ ವಿರುದ್ಧ ಎಂಬುದನ್ನು ಅವರು ಮರೆಯಬಾರದು ಎಂದು ಕಾಂಗ್ರೆಸ್ ಕಿಡಿಕಾರಿದೆ. ಅಮೆರಿಕ ಅಧ್ಯಕ್ಷರ ಮಾತಿನ ವೈಖರಿಯನ್ನು ಒಪ್ಪಲಾಗದು ಎಂದು ಹೇಳಿರುವ ಕಾಂಗ್ರೆಸ್‌ ನಾಯಕ ಅಹ್ಮದ್‌ ಪಟೇಲ್‌, "ಭಾರತದ ಪ್ರಧಾನಿ ಬಗ್ಗೆ ಟ್ರಂಪ್‌ ಆಡಿರುವ ಮಾತುಗಳು ಉತ್ತಮ ಅಭಿರುಚಿಯದ್ದಲ್ಲ. 2004ರಿಂದಲೂ ಭಾರತವು ಆಫ್ಘಾನ್‌ನಲ್ಲಿ ರಸ್ತೆಗಳು, ಅಣೆಕಟ್ಟುಗಳು ಸೇರಿದಂತೆ ಮೂಲ ಸೌಕರ್ಯಗಳನ್ನು ಒದಗಿಸುತ್ತಾ ಬಂದಿದೆ. 3 ಶತಕೋಟಿ ಡಾಲರ್‌ ನೆರವನ್ನೂ ನೀಡಿದೆ' ಎಂದಿದ್ದಾರೆ.
ಇದೇ ವಿಚಾರವಾಗಿ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೇವಾಲಾ ಅವರು, ಭಾರತದ ಪ್ರಧಾನಿ ಮೋದಿ ಅವರ ವಿರುದ್ಧ ಅಮೆರಿಕ ಅಧ್ಯಕ್ಷರ ಟೀಕೆ ಸರಿಯಲ್ಲ. ಆಫ್ಘಾನಿಸ್ತಾನ ವಿಚಾರವಾಗಿ ಅಮೆರಿಕದ ಧರ್ಮೋಪದೇಶಗಳು ನಮಗೆ ಬೇಕಿಲ್ಲ. ಈ ಹಿಂದೆ ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗಲೂ ಆಫ್ಘಾನಿಸ್ತಾನಕ್ಕೆ ಭಾರತ ಸಾಕಷ್ಟು ಆರ್ಥಿಕ ಮತ್ತು ಬಾಹ್ಯ ಬೆಂಬಲ ನೀಡಿದೆ. ಮಾನವೀಯ ದೃಷ್ಟಿಯಿಂದ ಆಫ್ಘಾನಿಸ್ತಾನಕ್ಕೆ ಆರ್ಥಿಕ ಪಾಲುದಾರಿಕೆಯ ಅಗತ್ಯವಿದೆ. ಆಫ್ಘಾನಿಸ್ತಾನದ ಸಹೋದರ-ಸಹೋದರಿಯರೊಂದಿಗೆ ಭಾರತ ಎಂದಿಗೂ ನಿಲ್ಲುತ್ತದೆ ಎಂದು ಟ್ವೀಟ್ ಮಾಡಿದ್ದಾರೆ.
ಆಫ್ಘನ್ ಗೆ ಭಾರತದ ನೆರವು ಮುಂದುವರೆಯಲಿದೆ: ಭಾರತ ಸರ್ಕಾರ
ಇನ್ನು ಅಮೆರಿಕ ಅಧ್ಯಕ್ಷರ  ಹೇಳಿಕೆಗೆ ಪರೋಕ್ಷ ಟಾಂಗ್ ನೀಡಿರುವ ಭಾರತ ಸರ್ಕಾರ, 'ನಾವು ಆಫ್ಘಾನ್‌ನಲ್ಲಿ ಹಲವಾರು ಮೂಲಸೌಕರ್ಯ ಯೋಜನೆಗಳನ್ನು ಕೈಗೊಂಡಿದ್ದೇವೆ. ಅದಕ್ಕೆ ಅಲ್ಲಿನ ಜನರಿಂದಲೂ ಸೂಕ್ತ ಸ್ಪಂದನೆ ಸಿಕ್ಕಿದೆ. ನಮ್ಮ ಇಂಥ ನೆರವು ಆ ದೇಶವನ್ನು ಆರ್ಥಿಕವಾಗಿ ಸಬಲಗೊಳ್ಳಲು ಸಹಾಯಕವಾಗಿದೆ' ಎಂದು ಹೇಳಿದೆ. 
SCROLL FOR NEXT