ದೇಶ

ಜೀಸಸ್ ಹುಟ್ಟಿದ್ದು ಹೇಗೆ ಎಂಬುದನ್ನು ಸುಪ್ರೀಂ ಕೋರ್ಟ್ ನಿರ್ಧರಿಸುತ್ತಾ? ಬಿಜೆಪಿ ಸಂಸದೆ ಮೀನಾಕ್ಷಿ ಲೇಖಿ

Srinivas Rao BV
ನವದೆಹಲಿ: ಅಯ್ಯಪ್ಪ ದೇವಾಲಯಕ್ಕೆ ಮಹಿಳೆಯರ ಪ್ರವೇಶಕ್ಕೆ ಅವಕಾಶ ಮಾಡಿಕೊಡುತ್ತಿರುವ ಕೇರಳ ಸರ್ಕಾರದ ವಿರುದ್ಧ ಬಿಜೆಪಿ ಸಂಸದೆ ಮೀನಾಕ್ಷಿ ಲೇಖಿ ತೀವ್ರವಾಗಿ ವಾಗ್ದಾಳಿ ನಡೆಸಿದ್ದಾರೆ. 
ಲೋಕಸಭೆಯಲ್ಲಿ ಈ ಬಗ್ಗೆ ಮಾತನಾಡಿರುವ ಮೀನಾಕ್ಷಿ ಲೇಖಿ, ಹಿಂದೂ ಧರ್ಮವನ್ನು ಅರ್ಥ ಮಾಡಿಕೊಳ್ಳದವರು, ಹಿಂದೂ ಧರ್ಮದ ಆಚರಣೆ ಗೊತ್ತಿಲ್ಲದವರು ಶಬರಿಮಲೆ ದೇವಾಲಯಕ್ಕೆ ಮಹಿಳೆಯರ ಪ್ರವೇಶಕ್ಕೆ ಅವಕಾಶ ನೀಡಬೇಕೆಂಬ ವಾದ ಮಂಡಿಸುತ್ತಿದ್ದಾರೆ. ಆದರೆ ಕಾಮಾಕ್ಯದಿಂದ ಚೆಂಗಲೂರ್ ವರೆಗೆ ದೇವತೆಗಳನ್ನು ರಜಸ್ವಲೆಯ ರೂಪದಲ್ಲಿ ಪೂಜಿಸುತ್ತಾರೆ. ಇದು ಹಿಂದೂ ಧರ್ಮ. ನಮ್ಮ ಧರ್ಮದಲ್ಲಿ ಎಲ್ಲದಕ್ಕೂ ಜಾಗವಿದೆ ಎಂದು ಮೀನಾಕ್ಷಿ ಲೇಖಿ ಹೇಳಿದ್ದಾರೆ. 
ನಿರ್ದಿಷ್ಟ ಪಂಥದ ಆಚರಣೆಗಳು ಅದೇ ರೀತಿಯಲ್ಲಿ ಮುಂದುವರೆಯಬೇಕು, ನಿರ್ದಿಷ್ಟ ಸಮುದಾಯದ ಆಚರಣೆಗಳನ್ನು ಹಾಗೆಯೇ ಮುಂದುವರೆಸಲು ಬಿಡಬೇಕು. ಅದನ್ನೇ ಸಹಿಷ್ಣುತೆ ಎನ್ನುವುದು.  ಅದೇ ರೀತಿಯಲ್ಲಿ ಶಬರಿಮಲೆಯಲ್ಲಿರುವ ದೇವರು ಬ್ರಹ್ಮಚಾರಿ ಸ್ವರೂಪದ್ದಾಗಿದೆ. ಅಲ್ಲಿನ ಆಚರಣೆಗಳ  ಮೇಲೆ ಮಹಿಳೆಯರು ಏಕೆ ತಮ್ಮನ್ನು ತಾವು ಹೇರಿಕೆ ಮಾಡಬೇಕು? ಅಷ್ಟೇ ಅಲ್ಲದೇ ಅಲ್ಲಿನ ಆಚರಣೆಗಳು ಪುರುಷರಿಗೆ ಆಧ್ಯಾತ್ಮಿಕ ಹಾಗೂ ಮಾನಸಿಕವಾಗಿ ತರಬೇತಿ ನೀಡುವಂಥಹದ್ದಾಗಿವೆ. ಅಲ್ಲಿಗೆ ತೆರಳುವಾಗ 41 ದಿನಗಳ ವ್ರತಾಚರಣೆ ಮಾಡಬೇಕೆಂದಿದೆ. ಅದನ್ನು 28 ದಿನಕ್ಕೆ, 30 ದಿನಕ್ಕೆ, 20 ದಿನಕ್ಕೆ ಇಳಿಸುವುದು ಕೋರ್ಟ್ ನ ಕೆಲಸವೇ ಎಂದು ಮೀನಾಕ್ಷಿ ಲೇಖಿ ಪ್ರಶ್ನಿಸಿದ್ದಾರೆ. 
ಇದೇ ಮಾದರಿಯಲ್ಲಿ ಸುಪ್ರೀಂ ಕೋರ್ಟ್ ಜೀಸಸ್ ಹೇಗೆ ಹುಟ್ಟಿದ ಎಂಬುದನ್ನೂ ನಿರ್ಧರಿಸುತ್ತದೆಯೇ? ಯಾವ ದೇಹವನ್ನು ದಹನ ಮಾಡಬೇಕು ಯಾವುದನ್ನು ದಫನ ಮಾಡಬೇಕೆಂದೂ ಸುಪ್ರೀಂ ಕೋರ್ಟ್ ಹೇಳಲಿದೆಯೇ ಎಂದೂ ಮೀನಾಕ್ಷಿ ಲೇಖಿ ಪ್ರಶ್ನಿಸಿದ್ದಾರೆ. ಮಹಿಳಾವಾದಿಗಳ ಸೋಗಿನಲ್ಲಿ ದೇವಾಲಯವನ್ನು ಪ್ರವೇಶಿಸಲು ಹವಣಿಸುತ್ತಿರುವವರು ದೇವಾಲಯವನ್ನು ಅತಿಕ್ರಮಿಸುತ್ತಿದ್ದಾರೆ. ಅವರು ಅಯ್ಯಪ್ಪ ದೇವರ ಭಕ್ತಾದಿಗಳಲ್ಲ. ಧಾರ್ಮಿಕ ವಿರೋಧಿಗಳು, ಅವರಿಗೆ ಧಾರ್ಮಿಕ ವಿರೋಧಿಗಳಾಗಿರುವುದಕ್ಕೆ ಹಕ್ಕಿದೆ ಆದರೆ ದೇವಾಲಯವನ್ನು ಅತಿಕ್ರಮಿಸುವ ಹಕ್ಕಿಲ್ಲ ಎಂದು ಮೀನಾಕ್ಷಿ  ಲೇಖಿ ಹೇಳಿದ್ದಾರೆ.
SCROLL FOR NEXT