ಪ್ರಧಾನಮಂತ್ರಿ ನರೇಂದ್ರ ಮೋದಿ
ಪಲಮು (ಜಾರ್ಖಾಂಡ್): ನಮಗಲ್ಲ, ಕಾಂಗ್ರೆಸ್ ಪಕ್ಷಕ್ಕೆ ವೋಟ್ ಬ್ಯಾಂಗ್ ಆಗಿದ್ದಾರೆ ರೈತರು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಶನಿವಾರ ಹೇಳಿದ್ದಾರೆ.
ಜಾರ್ಖಾಂಡ್ ರಾಜ್ಯದ ಪಲಮುವಿನಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿರುವ ಅವರು, ರೈತರು ಕಾಂಗ್ರೆಸ್ಸಿಗೆ ವೋಟ್ ಬ್ಯಾಂಕ್ ಆಗಿ ಹೋಗಿದ್ದಾರೆ. ಸಾಲ ಮನ್ನಾ ಹೆಸರನ್ನು ಹಿಡಿದು ಕಾಂಗ್ರೆಸ್ ನಾಯಕರು ರೈತರನ್ನು ತಪ್ಪು ಹಾದಿಗೆಳೆಯುತ್ತಿದ್ದಾರೆಂದು ಹೇಳಿದ್ದಾರೆ.
ಕಾಂಗ್ರೆಸ್ಸಿಗೆ ರೈತರು ವೋಟ್ ಬ್ಯಾಂಕ್, ಆದರೆ, ನಮಗೆ ಅನ್ನದಾತರು. ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಇರುವ ವ್ಯತ್ಯಾವೆಂದರೆ ಇದೇ. ಗರೀಬಿ ಹಟಾವೋ ಹೆಸರಿನಲ್ಲಿ ಈ ಹಿಂದೆ ಕಾಂಗ್ರೆಸ್ ದೇಶಕ್ಕೆ ಮೋಸ ಮಾಡಿತ್ತು. ಇದೀಗ ಸಾಲ ಮನ್ನಾ ಹೆಸರಿನಲ್ಲಿ ಮೋಸ ಮಾಡುತ್ತಿದೆ. ಮೋಸ ಹಾಗೂ ಸುಳ್ಳುಗಳ ಮೂಲಕ ಕಾಂಗ್ರೆಸ್ ರಾಜಕೀಯ ಮಾಡುತ್ತಿದೆ. ರೈತರಿಗೆ ಏನನ್ನೂ ಮಾಡಿಲ್ಲ. ಸಾಲಮನ್ನಾ ಹೆಸರಿನಲ್ಲಿ ರೈತರನ್ನು ತಪ್ಪು ಹಾದಿಗೆಳೆಯುತ್ತಿದ್ದರೆಂದು ತಿಳಿಸಿದ್ದಾರೆ.
ಕರ್ನಾಟಕದಲ್ಲಿ ರೈತರ ಸಾಲವನ್ನು ಮನ್ನಾ ಮಾಡಿಲ್ಲ. ಪೊಲೀಸರು ರೈತರ ಮನೆಗಳ ಮೇಲೆ ದಾಳಿ ಮಾಡಿ ಬಂಧನಕ್ಕೊಳಪಡಿಸುತ್ತಿದ್ದಾರೆ. ಹಿಂಸೆ ನೀಡಿ ರೈತರು ಮನೆ ಬಿಡುವಂತೆ ಮಾಡುತ್ತಿದ್ದಾರೆಂದಿದ್ದಾರೆ.
ಇದೇ ವೇಳೆ ಪಂಜಾಬ್ ರಾಜ್ಯವನ್ನು ಹೆಸರಿಸಿ ಮಾತನಾಡಿದ ಅವರು, ಈ ರಾಜ್ಯದಲ್ಲಿಯೂ ರೈತರ ಸಾಲ ಮನ್ನಾ ಮಾಡುವುದಾಗಿ ಕಾಂಗ್ರೆಸ್ ಭರವಸೆ ನೀಡಿತ್ತು. ಆದರೆ, ಇದು ಸತ್ಯಕ್ಕೆ ದೂರವಾಗಿದೆ. ಸತ್ಯವೇ ಬೇರೆಯಾಗಿದೆ. ಅವರು ನೀಡುರುವ ದಾಖಲೆಯಂತೆಯೇ ರೂ.3,400 ಕೋಟಿ ಸಾಲವನ್ನು ಒಂದೂ ವರ್ಷದಲ್ಲಿ ಮನ್ನಾ ಮಾಡಿದ್ದಾರೆ. ಸಾಲ ಮನ್ನಾ ಕಾಂಗ್ರೆಸ್'ಗೆ ಐದು ವರ್ಷಗಳ ಯೋಜನೆಯೇ? ರೈತರ ಸಾವಿನ ಬಳಿಕ ಸಾಲ ಮನ್ನಾ ಮಾಡುತ್ತಾರೆಯೇ? ಗ್ರಾಮೀಣಾಭಿವೃದ್ಧಿಗಾಗಿ ಕೇಂದ್ರ ಸರ್ಕಾರ ಶ್ರಮ ಪಡುತ್ತಿದೆ. 2022ರ ವೇಳೆಗೆ ರೈತರ ಆದಾಯವನ್ನು ದುಪ್ಪಟ್ಟು ಮಾಡುವ ಗುರಿಯನ್ನು ಹೊಂದಿದ್ದೇವೆ. ರೈತರ ಶಕ್ತಿಯನ್ನು ಹೆಚ್ಚಿಸಲು, ಸ್ವಯಂ ಅವಲಂಬಿತರಾಗಿರುವಂತೆ ಮಾಡಲು ಶ್ರಮ ಪಡುತ್ತಿದ್ದೇವೆ.
ರಾಷ್ಚ್ರೀಯ ಭದ್ರತೆಯೊಂದಿಗೆ ಕಾಂಗ್ರೆಸ್ ಹೊಡೆದಾಡುತ್ತಿದೆ. ಕೇವಲ ಒಂದು ಕುಟುಂಬಕ್ಕಾಗಿ ಸುಳ್ಳುಗಳನ್ನು ಹರಡುತ್ತಿದ್ದಾರೆ.
1984ರ ಸಿಕ್ಖ್ ವಿರೋಧಿ ದಂಗೆಯಲ್ಲಿ ನೂರಾರು ಮುಗ್ಧ ಸಿಕ್ಖರನ್ನು ಹತ್ಯೆ ಮಾಡಿದ ಆರೋಪಗಳನ್ನು ಎದುರಿಸುತ್ತಿರುವ ಕಾಂಗ್ರೆಸ್ ನಾಯಕರಿಗೆ ರಕ್ಷಣೆ ನೀಡುತ್ತಿರುವುದೂ ಅಲ್ಲದೆ, ಅವರಿಗೆ ಮುಖ್ಯಮಂತ್ರಿಯಾಗಿಯೂ ಗೌರವ ನೀಡುತ್ತಿದೆ. ದೆಹಲಿಯಲ್ಲಿ ಸಿಕ್ಖರನ್ನು ಹತ್ಯೆ ಮಾಡಿದ್ದ ಕಾಂಗ್ರೆಸ್ ನಾಯಕರಿಗೆ ಶಿಕ್ಷೆಯಾಗಬೇಕೆಂದು ಇಡೀ ದೇಶ ಬಯಸುತ್ತಿದೆ. ನಮ್ಮ ಸರ್ಕಾರ ಈಗಾಗಲೇ ಎಸ್ಐಟಿ ರಚನೆ ಮಾಡಿದ್ದು, ಫಲಿತಾಂಶ ನಿಮ್ಮ ಮುಂದೆ ಬರಲಿದೆ ಎಂದಿದ್ದಾರೆ.