ದೇಶ

ಬದ್ಧವೈರಿಗಳ ಒಗ್ಗಟ್ಟು: ಅಖಿಲೇಶ್ ಗೆ ಕರೆ ಮಾಡಿದ್ದ ಮಾಯಾವತಿ ಬಿಜೆಪಿ ಬಗ್ಗೆ ಹೇಳಿದ್ದಿಷ್ಟು!

Srinivas Rao BV
ಲಖನೌ: 2019 ಲೋಕಸಭಾ ಚುನಾವಣೆಗೆ ಬಿಜೆಪಿ ವಿರುದ್ಧ ವಿಪಕ್ಷಗಳು ಒಗ್ಗೂಡುತ್ತಿದ್ದು, ಉತ್ತರ ಪ್ರದೇಶದಲ್ಲಿ ಬದ್ಧವೈರಿಗಳಾಗಿದ್ದ ಸಮಾಜವಾದಿ ಪಕ್ಷ ಹಾಗೂ ಬಹುಜನ ಸಮಾಜ ಪಕ್ಷಗಳೂ ಮೋದಿಯನ್ನು ಎದುರಿಸಲು ಒಗ್ಗೂಡಿವೆ. 
ಈ ವರೆಗೂ ಆರೋಪ ಪ್ರತ್ಯಾರೋಪಗಳಲ್ಲಿ ತೊಡಗಿರುತ್ತಿದ್ದ ಬಿಎಸ್ ಪಿ ನಾಯಕಿ ಮಾಯಾವತಿ ಹಾಗೂ ಎಸ್ ಪಿ ನಾಯಕ ಅಖಿಲೇಶ್ ಯಾದವ್ ಬಿಜೆಪಿ ಕುರಿತು ದೂರವಾಣಿ ಕರೆಯಲ್ಲಿ ಮಾತನಾಡಿಕೊಂಡಿದ್ದಾರೆ. ಸ್ವತಃ ಬಿಎಸ್ ಪಿ ನಾಯಕಿ ಮಾಯಾವತಿ ಅಖಿಲೇಶ್ ಯಾದವ್ ಗೆ ಕರೆ ಮಾಡಿದ್ದು ಬಿಜೆಪಿ ಷಡ್ಯಂತ್ರದ ಬಗ್ಗೆ ಎಚ್ಚರದಿಂದ ಇರುವಂತೆ ಸಲಹೆ ನೀಡಿದ್ದಾರೆ. ಅಷ್ಟೇ ಅಲ್ಲದೇ ಸಂಪೂರ್ಣ ಬೆಂಬಲವನ್ನೂ ನೀಡುವುದಾಗಿ ಅಖಿಲೇಶ್ ಯಾದವ್ ಗೆ ಹೇಳಿದ್ದಾರೆ. 
ಗಣಿಗಾರಿಕೆ ಹಗರಣದಲ್ಲಿ ಸಿಬಿಐ ಅಖಿಲೇಶ್ ಯಾದವ್ ಅವರನ್ನು ವಿಚಾರಣೆಗೊಳಪಡಿಸಬಹುದೆಂಬ ವರದಿಗಳು ಪ್ರಕಟವಾಗುತ್ತಿದ್ದಂತೆಯೇ ಅಖಿಲೇಶ್ ಯಾದವ್ ಗೆ ಮಾಯಾವತಿ ಕರೆ ಮಾಡಿದ್ದು, ಅಖಿಲೇಶ್ ಯಾದವ್ ಪರ ನಿಲ್ಲುವುದಾಗಿ ಹೇಳಿದ್ದಾರೆ ಅಷ್ಟೇ ಅಲ್ಲದೇ ಬಿಜೆಪಿ ಷಡ್ಯಂತ್ರದ ಬಗ್ಗೆಯೂ ಎಚ್ಚರದಿಂದ ಇರಲು ಸಲಹೆ ನೀಡಿದ್ದಾರೆ. 
"ಈ ರೀತಿಯ ಗಿಮಿಕ್ ಗಳಿಂದ ಧೃತಿಗೆಡಬೇಡಿ" ಎಂದು ಮಾಯಾವತಿ ಅಖಿಲೇಶ್ ಗೆ ಹೇಳಿದ್ದಾರೆ,  ಮೈನಿಂಗ್ ಹಗರಣದ ತನಿಖೆಯ ಕುರಿತಾದ ವರದಿಗಳನ್ನು ಇದು ಬಿಜೆಪಿಯ ರಾಜಕೀಯ ವೈರತ್ವ  ಎಂದು ಹೇಳಿದ್ದಾರೆ. 
ಬಿಎಸ್ ಪಿ ಎಸ್ ಪಿ ನಾಯಕರ ಸಭೆ ನಡೆದ ಬೆನ್ನಲ್ಲೇ ಕೇಂದ್ರ ಸರ್ಕಾರ ಸಿಬಿಐ ನ್ನು ಬಳಸಿಕೊಂಡಿದೆ. ಹಳೆಯ ಮೈನಿಂಗ್ ಹಗರಣದಲ್ಲಿ ರೇಡ್ ಮಾಡಿಸಲಾಗಿದೆ. ಹಗರಣದ ಸಂಬಂಧ ಅಖಿಲೇಶ್ ಯಾದವ್ ಅವರನ್ನು ವಿಚಾರಣೆಗೊಳಪಡಿಸುವ ಸಾಧ್ಯತೆಗಳ ಬಗ್ಗೆ ಸುದ್ದಿಯನ್ನು ಬೇಕಂತಲೇ ಹಬ್ಬಿಸಲಾಗಿದೆ. ದೇಶದ ಜನತೆ ಬಿಜೆಪಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಮಾಯಾವತಿ ಹೇಳಿದ್ದಾರೆ. 
SCROLL FOR NEXT