ದೇಶ

ನಾಳೆ ಲೋಕಸಭೆಯಲ್ಲಿ ಮೇಲ್ವರ್ಗಕ್ಕೆ ಮೀಸಲಾತಿ ಮಸೂದೆ ಮಂಡನೆ, ರಾಜ್ಯಸಭೆ ಕಲಾಪ 1 ದಿನ ವಿಸ್ತರಣೆ

Lingaraj Badiger
ನವದೆಹಲಿ: ಆರ್ಥಿಕವಾಗಿ ಹಿಂದುಳಿದ ಮೇಲ್ವರ್ಗದ ಜನತೆಗೆ ಸರ್ಕಾರಿ ಉದ್ಯೋಗ ಹಾಗೂ ಶಿಕ್ಷಣದಲ್ಲಿ ಶೇ.10 ರಷ್ಟು ಮೀಸಲಾತಿ ನೀಡಲು ಮುಂದಾಗಿರುವ ಕೇಂದ್ರ ಸರ್ಕಾರ, ಈ ಸಂಬಂಧ ಮಂಗಳವಾರ ಲೋಕಸಭೆಯಲ್ಲಿ ಮೀಸಲಾತಿ ತಿದ್ದುಪಡಿ ಮಸೂದೆ ಮಂಡಿಸಲಿದೆ.
2019ರ ಲೋಕಸಭೆ ಚುನಾವಣೆಯಲ್ಲಿ ಮೇಲ್ವರ್ಗದ ಜನತೆಯ ಮತ ಸೆಳೆಯಲು ನರೇಂದ್ರ ಮೋದಿ ಸರ್ಕಾರ ಚಳಿಗಾಲದ ಅಧಿವೇಶನದಲ್ಲಿಯೇ ಮೀಸಲಾತಿ ಮಸೂದೆ ಮಂಡಿಸಿ ಅಂಗೀಕಾರ ಪಡೆಯಲು ಮುಂದಾಗಿದೆ. ಇದಕ್ಕಾಗಿಯೇ ನಾಳೆ ಅಂತ್ಯವಾಗಲಿದ್ದ ರಾಜ್ಯಸಭೆ ಕಲಾಪವನ್ನು ಒಂದು ದಿನ ವಿಸ್ತರಿಸಲಾಗಿದೆ.
ಮೇಲ್ವರ್ಗದ ಜನತೆಗೆ ಶೇ.10 ರಷ್ಟು ಮೀಸಲಾತಿ ನೀಡುವ ಪ್ರಸ್ತಾವನೆಗೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿದ ಬೆನ್ನಲ್ಲೇ, ರಾಜ್ಯಸಭೆ ಕಲಾಪವನ್ನು ಒಂದು ದಿನ ವಿಸ್ತರಿಸುವಂತೆ ಮೋದಿ ಸರ್ಕಾರ ಮಾಡಿದ ಮನವಿಯನ್ನು ರಾಜ್ಯಸಭಾ ಅಧ್ಯಕ್ಷ ಎಂ. ವೆಂಕಯ್ಯ ನಾಯ್ಡು ಪುರಸ್ಕರಿಸಿದ್ದಾರೆ.
ಸುಪ್ರೀಂ ಕೋರ್ಟ್ ನ ತೀರ್ಪಿನ ಪ್ರಕಾರ ಮೀಸಲಾತಿ ಪ್ರಮಾಣ ಒಟ್ಟಾರೆ ಶೇ.50 ರಷ್ಟನ್ನು ಮೀರುವಂತಿಲ್ಲ. ಆದರೆ ಕೇಂದ್ರ ಸರ್ಕಾರ ಈಗ ಕೈಗೊಂಡಿರುವ 
ಮೇಲ್ವರ್ಗದ ಬಡವರಿಗೆ ಶೇ.10 ರಷ್ಟು ಮೀಸಲಾತಿ ನಿರ್ಧಾರದಿಂದ ಮೀಸಲಾತಿ ಪ್ರಮಾಣ ಒಟ್ಟಾರೆ ಶೇ.60 ಕ್ಕೆ ಏರಿಕೆಯಾಗಲಿದೆ. ಹೊಸ ಮೀಸಲಾತಿ ನಿಯಮ ಜಾರಿಗೆ ಬರಬೇಕಾದರೆ ಸರ್ಕಾರ ಕಾನೂನು ತಿದ್ದುಪಡಿ ತರುವುದು ಅತ್ಯಗತ್ಯವಾಗಿದೆ. ಹೀಗಾಗಿ ಕೇಂದ್ರ ಸರ್ಕಾರ ಮೀಸಲಾತಿ ತಿದ್ದುಪಡಿ ಮಸೂದೆಯನ್ನು ನಾಳೆ ಲೋಕಸಭೆಯಲ್ಲಿ ಮಂಡಿಸಿ, ಅಂಗೀಕಾರ ಪಡೆದು, ನಾಡಿದ್ದು ರಾಜ್ಯಸಭೆಯಲ್ಲಿ ಮಂಡಿಸಲು ನಿರ್ಧರಿಸಿದೆ.
SCROLL FOR NEXT