ದೇಶ

ದೆಹಲಿ ಸಿಎಂ ಕೇಜ್ರಿವಾಲ್ ವಜಾ ಕೋರಿ ಸಲ್ಲಿಸಿದ್ದ ಅರ್ಜಿ ವಜಾ

Lingaraj Badiger
ನವದೆಹಲಿ: ಕ್ರಿಮಿನಲ್ ಕೇಸ್ ಎದುರಿಸುತ್ತಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ವಜಾಗೊಳಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ಮಂಗಳವಾರ ವಜಾಗೊಳಿಸಿದೆ.
ದೆಹಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಅಂಶು ಪ್ರಕಾಶ್ ಅವರ ಮೇಲೆ ಹಲ್ಲೆ ಪ್ರಕರಣದಲ್ಲಿ ಆರೋಪಿಗಳಾಗಿರುವ ಅರವಿಂದ್ ಕೇಜ್ರಿವಾಲ್ ಹಾಗೂ ಅವರ ಸಂಪುಟದ ಸಚಿವರನ್ನು ವಜಾಗೊಳಿಸಬೇಕು ಎಂದು ವಕೀಲ ಹರಿನಾಥ್ ರಾಮ್ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಾಜೇಂದ್ರ ಮೆನನ್ ನೇತೃತ್ವದ ಪೀಠ, ಹಲ್ಲೆ ಪ್ರಕರಣ ಇನ್ನೂ ಬಾಕಿ ಇದೆ. ಚುನಾಯಿತ ಪ್ರತಿನಿಧಿಗಳನ್ನು ಹೀಗೆ ವಜಾಗೊಳಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಹಲ್ಲೆ ಪ್ರಕರಣ ಇನ್ನೂ ತನಿಖೆ ಹಂತದಲ್ಲಿದೆ. ಅವರು ಖುಲಾಸೆಯಾಗಬಹದು. ಹಾಗ ಏನು ಮಾಡುತ್ತೀರಿ? ಎಂದು ಪ್ರಶ್ನಿಸಿದ ಕೋರ್ಟ್, ದೆಹಲಿ ಸಿಎಂ ತಪ್ಪಿತಸ್ಥ ಎಂದು ತೀರ್ಪು ನೀಡಿದ ನಂತರ ಬನ್ನಿ ಎಂದು ಅರ್ಜಿದಾರರಿಗೆ ಹೇಳಿದೆ.
ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವ ಅರವಿಂದ್ ಕೇಜ್ರಿವಾಲ್ ಅವರಿಗೆ ಕಾನೂನಾತ್ಮಕವಾಗಿ ಅಥವಾ ಸಂವಿಧಾನಾತ್ಮಕವಾಗಿ ಮುಖ್ಯಮಂತ್ರಿ ಹುದ್ದೆಯಲ್ಲಿ ಮುಂದುವರೆಯುವ ಹಕ್ಕು ಇಲ್ಲ ಎಂದು ಅರ್ಜಿದಾರರು ವಾದಿಸಿದ್ದರು.
SCROLL FOR NEXT