ದೇಶ

ಸಿಬಿಐ ನಿರ್ದೇಶಕ ಸ್ಥಾನದಿಂದ ಅಲೋಕ್ ವರ್ಮಾ ವಜಾ, ಅಗ್ನಿಶಾಮಕ ದಳ ಡಿಜಿ ಆಗಿ ನೇಮಕ

Lingaraj Badiger
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಉನ್ನತಾಧಿಕಾರ ಆಯ್ಕೆ ಸಮಿತಿ ಸಿಬಿಐ ನಿರ್ದೇಶಕ ಅಲೋಕ್ ಕುಮಾರ್ ವರ್ಮಾ ಅವರನ್ನು ಗುರುವಾರ ವಜಾಗೊಳಿಸಿದೆ.
ಪ್ರಧಾನಿ ಮೋದಿ ನೇತೃತ್ವದ ಸಮಿತಿ ಇಂದು ಸುಮಾರು ಎರಡು ಗಂಟೆಗಳ ಕಾಲ ಚರ್ಚಿಸಿ, ದೇಶದ ಅತ್ಯುನ್ನತ ತನಿಖಾ ಸಂಸ್ಥೆಯ ಮುಖ್ಯಸ್ಥ ಸ್ಥಾನದಿಂದ ವರ್ಮಾ ಅವರನ್ನು ವಜಾಗೊಳಿಸಿ, ಅಗ್ನಿ ಶಾಮಕ ದಳದ ಡಿಜಿ ಆಗಿ ನೇಮಕ ಮಾಡಲಾಗಿದೆ.
ಕಡ್ಡಾಯ ರಜೆ ಮೇಲೆ ಕಳುಹಿಸಲಾಗಿದ್ದ ಅಲೋಕ್ ವರ್ಮಾ ಅವರನ್ನೇ ಸಿಬಿಐ ನಿರ್ದೇಶಕರಾಗಿ ಮುಂದುವರಿಸಬೇಕೆಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದ 48 ಗಂಟೆಗಳಲ್ಲೇ ವರ್ಮಾ ಅವರನ್ನು ಪ್ರಧಾನಿ ಮೋದಿ, ಹಿರಿಯ ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆ ಹಾಗೂ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಎ.ಕೆ. ಸಿಕ್ರಿ ಅವರನ್ನೊಳಗೊಂಡ ಉನ್ನತಾಧಿಕಾರ ಸಮಿತಿ ಈ ಮಹತ್ವದ ನಿರ್ಧಾರ ತೆಗೆದುಕೊಂಡಿದೆ.
1979ನೇ ಬ್ಯಾಚ್ ಎಜಿಎಂಯುಟಿ ಕೇಡರ್ ಐಪಿಎಸ್ ಅಧಿಕಾರಿಯಾಗಿರುವ ಅಲೋಕ್ ವರ್ಮಾ ಅವರನ್ನು ಭ್ರಷ್ಟಾಚಾರ ಆರೋಪದ ಮೇಲೆ ವಜಾಗೊಳಿಸಿಲಾಗಿದ್ದು, ಸಿಬಿಐ ಇತಿಹಾಸದಲ್ಲೇ ಇದೇ ಮೊದಲು ಎನ್ನಲಾಗಿದೆ.
ಸಿಬಿಐ ನಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರದ ಬಗ್ಗೆ ಸಿವಿಸಿ ವಿಚಾರಣೆ ನಡೆಸಿ ವರದಿ ನೀಡಿತ್ತು. ಅಲೋಕ್ ವರ್ಮಾ ಅವರನ್ನು ವಜಾಗೊಳಿಸಬೇಕೋ, ಬೇಡವೋ ಎಂಬ ನಿರ್ಧಾರ ಕೈಗೊಳ್ಳುವ ಅಧಿಕಾರ ಉನ್ನತಾಧಿಕಾರ ಸಮಿತಿಗಿತ್ತು.
ಆಲೋಕ್‌ ಕುಮಾರ್‌ ವರ್ಮಾ ಅವರ ಅಧಿಕಾರಾವಧಿಯು ಇದೇ ಜನವರಿ 31ರಂದು ಅಂತ್ಯಗೊಳ್ಳಲಿತ್ತು.
SCROLL FOR NEXT