ದೇಶ

ರಾಹುಲ್ ಗಾಂಧಿ 'ಮಹಿಳೆ' ಹೇಳಿಕೆ ಸಮರ್ಥಿಸಿಕೊಂಡ ಪ್ರಕಾಶ್ ರೈ

Lingaraj Badiger
ನವದೆಹಲಿ: ರಾಫೆಲ್ ವಿವಾದಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರ ವಿರುದ್ಧ ನೀಡಿದ್ದ ಹೇಳಿಕೆಯನ್ನು ಖ್ಯಾತ ಬಹುಭಾಷಾ ನಟ ಪ್ರಕಾಶ್ ರೈ ಅವರು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ.
ರಾಹುಲ್ ಗಾಂಧಿ ಅವರು ಮಹಿಳೆಯರಿಗೆ ವಿರುದ್ಧ ಹೇಳಿಕೆ ನೀಡಿಲ್ಲ. ಅವರು ಅತಿ ಮುಖ್ಯವಾಗಿ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ತೃತೀಯಲಿಂಗಿಯೊಬ್ಬರನ್ನು ನೇಮಿಸಿದ್ದಾರೆ. ಏಕೆ ಅವರ ಹೇಳಿಕೆಯನ್ನು ಒಂದೇ ದಾರಿಯಲ್ಲಿ ನೋಡ್ತೀರಿ? ಎಂದು ನಟ ಪ್ರಶ್ನಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ರಾಫೆಲ್ ಬಗ್ಗೆ ಉತ್ತರ ನೀಡಿಲ್ಲ ಮತ್ತು ಸಂಸತ್ ಕಲಾಪಕ್ಕೂ ಅವರು ಗೈರು ಆಗಿದ್ದರು ಅನ್ನೋದು ನಿಜವಲ್ಲವೇ? ಎಂದು  ಪ್ರಕಾಶ್ ರೈ ಪ್ರಶ್ನಿಸಿದ್ದಾರೆ.
ರಾಫೆಲ್ ಯುದ್ಧ ವಿಮಾನ ಖರೀದಿ ಚರ್ಚೆಯಿಂದ ಪ್ರಧಾನಿ ಮೋದಿ ಓಡಿಹೋಗಿದ್ದಾರೆ. ಅವರ ಬದಲು ದೇಶದ ಮೊದಲ ಬಾರಿಗೆ ರಕ್ಷಣಾ ಖಾತೆ ಹೊಣೆ ಹೊತ್ತಿರುವ ಮಹಿಳೆಯನ್ನು ಮುಂದೆ ಬಿಟ್ಟಿದ್ದಾರೆ ಎಂದು ರಾಹುಲ್ ವಾಗ್ದಾಳಿ ನಡೆಸಿದ್ದರು.
ಭಾರತದ ಮಹಿಳಾ ಶಕ್ತಿಗೆ ಇದು ಅವಮಾನ. ಕಾಂಗ್ರೆಸ್ ರಕ್ಷಣಾ ಸಚಿವೆಗೆ ಅವಮಾನ ಮಾಡಿದೆ. ಇದು ಮಹಿಳೆಯೊಬ್ಬರಿಗೆ ಮಾಡುತ್ತಿರುವ ಅವಮಾನ ಅಲ್ಲ. ಭಾರತದ ಇಡೀ ಸ್ತ್ರೀ ಶಕ್ತಿಗೆ ಮಾಡುತ್ತಿರುವ ಅವಮಾನ ಎಂದು ರಾಹುಲ್ ಗಾಂಧಿ ಹೇಳಿಕೆಗೆ ಪ್ರಧಾನಿ ಮೋದಿ ತಿರುಗೇಟು ನೀಡಿದ್ದರು.
SCROLL FOR NEXT