ದೇಶ

ಮೇಲ್ವರ್ಗದ ಬಡವರಿಗೆ ಶೇ.10ರಷ್ಟು ಮೀಸಲಾತಿ ಇನ್ನು ಕಾನೂನು, ರಾಷ್ಟ್ರಪತಿಗಳ ಅನುಮೋದನೆ

Srinivasamurthy VN
ನವದೆಹಲಿ: ಆರ್ಥಿಕವಾಗಿ ಹಿಂದುಳಿದಿರುವ ಮೇಲ್ವರ್ಗದವರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಶೇ.10ರಷ್ಟು ಮೀಸಲಾತಿ ಒದಗಿಸುವ ಮಸೂದೆಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಸಹಿ ಹಾಕಿದ್ದು, ಮಸೂದೆ ಇದೀಗ ಅಧಿಕೃತ ಕಾನೂನಾಗಿದೆ.
ಜನವರಿ 8ರಂದು ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಿ ಅನುಮೋದನೆ ಪಡೆಯಲಾಗಿತ್ತು. ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ಸಚಿವ ಥಾವರ್ ಚಂದ್ ಗೆಹ್ಲೋಟ್ ಈ ಮಸೂದೆಯನ್ನು ಮಂಡಿಸಿದರು. ಸಮಾಜವಾದಿ ಪಕ್ಷದ ತೀವ್ರ ಪ್ರತಿಭಟನೆಯ ನಡುವೆಯೂ ಥಾವರ್ ಚಂದ್ ಗೆಹ್ಲೋಟ್ ಈ ಮಸೂದೆಯನ್ನು ಮಂಡಿಸಿದರು. ಸದನದಲ್ಲಿ ಹಾಜರಿದ್ದ ಸದಸ್ಯರಲ್ಲಿ ಮಸೂದೆ ಪರವಾಗಿ 323 ಸಂಸದರು ಮತ ಚಲಾಯಿಸಿದರೆ, 5 ಮಂದಿ ಮಾತ್ರ ವಿರುದ್ಧ ಮತ ಹಾಕಿದರು. ಆ ಮೂಲಕ ವಿಧೇಯಕ ಕೆಳಮನೆಯ ಅಂಗೀಕಾರ ಪಡೆಯಿತು. 
ಬಳಿಕ ರಾಜ್ಯಸಭೆಯಲ್ಲಿ ಮಂಡನೆಯಾದ ಮಸೂದೆ ಸರ್ವಾನುಮತದಿಂದ ಅಂಗೀಕಾರವಾಯಿತು. ರಾಜ್ಯಸಭೆಯಲ್ಲಿ ಮೀಸಲಾತಿ ಮಸೂದೆ ಕುರಿತು ತೀವ್ರ ಚರ್ಚೆಯ ನಂತರ ವಿಧೇಯಕವನ್ನು ಮತಕ್ಕೆ ಹಾಕಲಾಯಿತು. ವಿಧೇಯಕದ ಪರವಾಗಿ 165 ಹಾಗೂ ವಿಧೇಯಕ ವಿರುದ್ಧವಾಗಿ ಕೇವಲ 7 ಮತ ಬಿದ್ದಿತ್ತು. ಇದೀಗ ಮಸೂದೆಗೆ ರಾಷ್ಟ್ರಪತಿಗಳು ಸಹಿ ಹಾಕುವ ಮೂಲಕ ಮಸೂದೆ ಕಾನೂನಾಗಿ ಬದಲಾಗಿದೆ.
2019ರ ಲೋಕಸಭಾ ಚುನಾವಣೆಗೆ ಕೇವಲ 100 ದಿನ ಬಾಕಿ ಇರುವಂತೆಯೇ ಮೇಲ್ವರ್ಗದವರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಶೇ.10ರಷ್ಟು ಮೀಸಲಾತಿ ಒದಗಿಸುವ ಮಸೂದೆಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಿನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿತ್ತು.
SCROLL FOR NEXT