ದೇಶ

ಸೋಲುವ ಭೀತಿಯಿಂದ ಎಸ್ಪಿ-ಬಿಎಸ್ಪಿ ಮೈತ್ರಿ ಮಾಡಿಕೊಂಡಿವೆ: ಪಿಎಂ ಮೋದಿ

Sumana Upadhyaya

ಲಕ್ನೋ/ ಮುಂಬೈ: ಸಮಾಜವಾದಿ ಮತ್ತು ಬಹುಜನ ಸಮಾಜವಾದಿ ಪಕ್ಷಗಳ ಚುನಾವಣಾ ಪೂರ್ವ ಮೈತ್ರಿಯು ರಾಜಕೀಯ ಅವಕಾಶವಾದಿತನವಾಗಿದ್ದು ಹತಾಶೆಯಿಂದ ಕೈಜೋಡಿಸಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ವ್ಯಾಖ್ಯಾನಿಸಿದ್ದಾರೆ.

ಅಕ್ಕಪಕ್ಕ ನಿಂತು ಒಬ್ಬರ ಮುಖವನ್ನು ಮತ್ತೊಬ್ಬರು ನೋಡಲು ಆಗದಿದ್ದವರು ಇಂದು ಕೈ ಕೈ ಕುಲುಕುತ್ತಾ ಮೋದಿಯನ್ನು ಅಧಿಕಾರದಿಂದ ದೂರವಿರಿಸಲು ಒಂದಾಗಿದ್ದಾರೆ ಎಂದು ಮೋದಿ ಆಗ್ರಾದಲ್ಲಿ ರ್ಯಾಲಿಯೊಂದರಲ್ಲಿ ಪ್ರತಿಕ್ರಿಯಿಸಿದ್ದಾರೆ.

ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ವಿರುದ್ಧ ವಾಗ್ದಾಳಿ ನಡೆಸಿದ ಮೋದಿ, ಅಕ್ರಮ ಗಣಿಗಾರಿಕೆ ಕೇಸಿನಲ್ಲಿ ಅಖಿಲೇಶ್ ಯಾದವ್ ವಿರುದ್ಧ ಸಿಬಿಐ ತನಿಖೆ ನಡೆಯುತ್ತಿದೆ. ಉತ್ತರ ಪ್ರದೇಶದಲ್ಲಿ ಮರಳು, ಜಲ್ಲಿಕಲ್ಲು ತಿಂದು ಜೀರ್ಣಿಸಿಕೊಂಡವರು ಇಂದು ಕೈಜೋಡಿಸಿದ್ದಾರೆ ಎಂದು ವ್ಯಂಗ್ಯವಾಡಿದರು.

ಚೌಕಿದಾರನಾದ ನನ್ನನ್ನು ನೋಡಿ ಎಸ್ಪಿ ಮತ್ತು ಬಿಎಸ್ಪಿಯವರು ಭಯಬಿದ್ದಿದ್ದಾರೆ. ನಾನು ಅಧಿಕಾರದಿಂದ ಕೆಳಗಿಳಿದರೆ ಒಟ್ಟು ಸೇರಿ ದೇಶವನ್ನು ಲೂಟಿ ಮಾಡಬಹುದು ಎಂಬ ಆಲೋಚನೆ ಅವರದ್ದು, ದೇಶವನ್ನು ಲೂಟಿ ಮಾಡಲು ಹೊರಟವರನ್ನು ನೆಮ್ಮದಿಯಿಂದ ಇರಲು ಬಿಡುವುದಿಲ್ಲ ಎಂದರು.

ಇದೇ ಸಂದರ್ಭದಲ್ಲಿ ಅವರು ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ಶೇಕಡಾ 10ರಷ್ಟು ಮೀಸಲಾತಿ ತರುವ ಕುರಿತು ಪ್ರಸ್ತಾಪಿಸಿ ಇದು ಸರ್ಕಾರದ ಸಬ್ ಕಾ ಸಾತ್, ಸಬ್ ಕಾ ವಿಕಾಸ್ ಧ್ಯೇಯಕ್ಕೆ ಸ್ಪೂರ್ತಿಯಾಗಿದೆ ಎಂದರು.

SCROLL FOR NEXT