ದೇಶ

ಹಿಂದಿನ ಸರ್ಕಾರಗಳು ಸುಲ್ತಾನರಂತೆ ಆಳಿ ದೇಶದ ಶ್ರೀಮಂತ ಪರಂಪರೆಯನ್ನು ನಿರ್ಲಕ್ಷಿಸಿವೆ: ಪ್ರಧಾನಿ ಮೋದಿ

Sumana Upadhyaya

ಬಲಂಗೀರ್: ದೇಶದ ಶ್ರೀಮಂತ ಪರಂಪರೆಯನ್ನು ನಿರ್ಲಕ್ಷಿಸಿ ಸುಲ್ತಾನರ ರೀತಿಯಲ್ಲಿ ಹಿಂದಿನ ಸರ್ಕಾರಗಳು ದೇಶವನ್ನಾಳಿವೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಆರೋಪಿಸಿದ್ದಾರೆ.
ದೇಶದ ಶ್ರೀಮಂತ ಪರಂಪರೆಯನ್ನು ತಮ್ಮ ಸರ್ಕಾರ ರಕ್ಷಿಸಿ ಕಾಪಾಡುವ ನಿಟ್ಟಿನಲ್ಲಿ ಬದ್ಧವಾಗಿದೆ ಎಂದು ನುಡಿದ ಅವರು ಪುರಾತನ ಹೆಗ್ಗುರುತುಗಳಿಗೆ ಆಧುನಿಕ ಸ್ಪರ್ಶ ಕೂಡ ನೀಡಲಿದೆ ಎಂದರು.

ಹಿಂದಿನ ಸರ್ಕಾರಗಳು ಕೇಂದ್ರದಲ್ಲಿ ಸುಲ್ತಾನರ ರೀತಿ ಆಳ್ವಿಕೆ ನಡೆಸಿದೆ. ನಮ್ಮ ದೇಶದ ಶ್ರೀಮಂತ ಪರಂಪರೆಯನ್ನು ನಿರ್ಲಕ್ಷಿಸಿವೆ. ನಮ್ಮ ನಾಗರಿಕತೆಗೆ ಪ್ರಾಮುಖ್ಯತೆ ನೀಡಿರಲಿಲ್ಲ ಎಂದು ಒಡಿಶಾದ ಬಲಂಗೀರ್ ನಲ್ಲಿ ಬಿಜೆಪಿ ರ್ಯಾಲಿಯಲ್ಲಿ ಆರೋಪಿಸಿದರು.

ಯೋಗ ಭಾರತ ದೇಶದ ಪ್ರಾಚೀನ ಸಂಪತ್ತು ಎಂಬುದನ್ನು ಕೂಡ ಮರೆತು ಹಲವರು ಯೋಗ ದಿನಾಚರಣೆಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಬೆಲೆ ಕಟ್ಟಲು ಸಾಧ್ಯವಿಲ್ಲದ ಪ್ರಾಚೀನ ವಸ್ತುಗಳು, ಮೂರ್ತಿಗಳನ್ನು ಕದ್ದು ಹೊರದೇಶಗಳಿಗೆ ಮಾರಾಟ ಮಾಡಲಾಗುತ್ತಿತ್ತು. ಅಂತಹ ಅತ್ಯಮೂಲ್ಯ ವಸ್ತುಗಳನ್ನು ಮರಳಿ ದೇಶಕ್ಕೆ ತರುವ ನಿಟ್ಟಿನಲ್ಲಿ ಎನ್ ಡಿಎ ಸರ್ಕಾರ ತಳಮಟ್ಟದಿಂದ ಕ್ರಮ ಕೈಗೊಳ್ಳುತ್ತಿದೆ ಎಂದರು.

ಕಳೆದ ನಾಲ್ಕು ವರ್ಷಗಳಲ್ಲಿ ವಿದೇಶಗಳಿಂದ ಅನೇಕ ಮೂರ್ತಿಗಳು, ಪ್ರಾಚೀನ ವಸ್ತುಗಳನ್ನು ಕೇಂದ್ರ ಸರ್ಕಾರ ಮತ್ತೆ ತರಿಸಿಕೊಂಡಿದೆ ಎಂದರು.

ಇದಕ್ಕೂ ಮುನ್ನ ಒಡಿಶಾಕ್ಕೆ ಸುಮಾರು 1,550 ಕೋಟಿ ರೂಪಾಯಿಗಳ ಯೋಜನೆಯನ್ನು ಅನಾವರಣಗೊಳಿಸಿದರು.

SCROLL FOR NEXT