ದೇಶ

ವರ್ಮಾ ನಂತರ ರಾಕೇಶ್ ಅಸ್ತಾನ ಸೇರಿ ನಾಲ್ವರು ಅಧಿಕಾರಿಗಳು ಸಿಬಿಐನಿಂದ ಎತ್ತಂಗಡಿ

Lingaraj Badiger
ನವದೆಹಲಿ: ಸಿಬಿಐ ನಿರ್ದೇಶಕರಾಗಿದ್ದ ಅಲೋಕ್ ವರ್ಮಾ ಅವರನ್ನು ಅಗ್ನಿ ಶಾಮಕ ದಳದ ಡಿಜಿಯಾಗಿ ವರ್ಗಾವಣೆ ಮಾಡಿದ್ದ ಕೇಂದ್ರ ಸರ್ಕಾರ ಇದೀಗ, ದೇಶದ ಅತ್ಯುನ್ನತ ತನಿಖಾ ಸಂಸ್ಥೆಯ ನಂ.2 ಸ್ಥಾನದಲ್ಲಿ ಸಿಬಿಐ ವಿಶೇಷ ನಿರ್ದೇಶಕ ರಾಕೇಶ್ ಅಸ್ತಾನ ಅವರನ್ನು ಎತ್ತಂಗಡಿ ಮಾಡಿ, ವಾಯುಯಾನ ಭದ್ರತಾ ಮುಖ್ಯಸ್ಥರನ್ನಾಗಿ ನೇಮಿಸಿದೆ.
1984ನೇ ಬ್ಯಾಚ್ ನ ಗುಜರಾತ್ ಕೆಡರ್ ನ ಐಪಿಎಸ್ ಅಧಿಕಾರಿಯಾಗಿರುವ ಅಸ್ತಾನ ಅವರು ಇನ್ನು ಎರಡು ವರ್ಷಗಳ ಕಾಲ ನಾಗರಿಕ ವಿಮಾನಯಾನ ಭದ್ರತಾ ಮುಖ್ಯಸ್ಥರಾಗಿ ಸೇವೆ ಸಲ್ಲಿಸಲಿದ್ದಾರೆ.
ಅಸ್ತಾನ ಅವರೊಂದಿಗೆ ಸಿಬಿಐ ಜಂಟಿ ನಿರ್ದೇಶಕ ಅರುಣ್ ಕುಮಾರ್ ಶರ್ಮಾ, ಡಿಐಜಿ ಮನೀಶ್ ಕುಮಾರ್ ಸಿನ್ಹಾ ಮತ್ತು ಎಸ್ ಪಿ ಜಯಂತ್ ಜೆ ನಾಯ್ಕನವರ್ ಅವರನ್ನು ಕೇಂದ್ರ ಸರ್ಕಾರ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.
ಸಿಬಿಐಗೆ ನೂತನ ನಿರ್ದೇಶಕರ ನೇಮಕಕ್ಕೆ ಸಂಬಂಧಿಸಿದಂತೆ ಇದೇ 24ರಂದು ಆಯ್ಕೆ ಸಮಿತಿ ಸಭೆ ನಡೆಯಲಿದ್ದು, ಅದಕ್ಕೂ ಮುನ್ನ ತನಿಖಾ ಸಂಸ್ಥೆಯ ಸದ್ಯದ ಪರಿಸ್ಥಿತಿಯನ್ನು ಸರಿಪಡಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಈ ಕ್ರಮ ಕೈಗೊಂಡಿದೆ ಎನ್ನಲಾಗಿದೆ.
ಅಲೋಕ್ ವರ್ಮಾ ಅವರು ಸಿಬಿಐ ನಿರ್ದೇಶಕ ಹುದ್ದೆಯಿಂದ ಅಗ್ನಿ ಶಾಮಕ ದಳದ ಡಿಜಿಯಾಗಿ ನೇಮಕಗೊಂಡ ನಂತರ ಸರ್ಕಾರಿ ಸೇವೆಗೆ ರಾಜೀನಾಮೆ ನೀಡಿದ್ದರು.
SCROLL FOR NEXT