ಬೆಂಗಳೂರು ಸೆಂಟ್ರಲ್ ಕ್ಷೇತ್ರದಲ್ಲಿ ಕಾಂಗ್ರೆಸ್ ಬೆಂಬಲ ಕೇಳಿದ ಪ್ರಕಾಶ್ ರಾಜ್
ಬೆಂಗಳೂರು: 2019 ರ ಲೋಕಸಭಾ ಚುನಾಣೆಯಲ್ಲಿ ಸ್ಪರ್ಧಿಸುವುದಾಗಿ ಘೋಷಣೆ ಮಾಡಿರುವ ನಟ ಪ್ರಕಾಶ್ ರಾಜ್, ಬೆಂಗಳೂರು ಸೆಂಟ್ರಲ್ ಲೋಕಸಭಾ ಕ್ಷೇತ್ರದಲ್ಲಿ ತಮ್ಮನ್ನು ಕಾಂಗ್ರೆಸ್ ಬೆಂಬಲಿಸಬಹುದು ಎಂದು ಹೇಳಿದ್ದಾರೆ.
ಜ.18 ರಂದು ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿರುವ ಪ್ರಕಾಶ್ ರಾಜ್ ಅವರನ್ನು, "ಬೆಂಗಳೂರು ಸೆಂಟ್ರಲ್ ಕ್ಷೇತ್ರದಲ್ಲಿ ತಾವು ಸ್ಪರ್ಧಿಸಿದರೆ ಕಾಂಗ್ರೆಸ್ ಗೆ ಬರುವ ಅಲ್ಪಸಂಖ್ಯಾತರ ಮತಗಳು ವಿಭಜನೆಯಾಗುವುದಿಲ್ಲವೇ ಎಂದು ಪತ್ರಕರ್ತರು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಪ್ರಕಾಶ್ ರಾಜ್, ಅಲ್ಪಸಂಖ್ಯಾತರ ಮತಗಳು ವಿಭಜನೆಯಾಗುವುದಾದರೆ ಕಾಂಗ್ರೆಸ್ ನನ್ನನ್ನು ಬೆಂಬಲಿಸಲಿ, ಕಾಂಗ್ರೆಸ್ ನ ಹೋರಾಟ ಕೋಮುವಾದಿ ಶಕ್ತಿಗಳ ವಿರುದ್ಧವಿದೆ ಎಂದಾದರೆ ನಾನು ಅವರ ಮಹಾಘಟಬಂಧನವನ್ನೂ ಬೆಂಬಲಿಸುತ್ತೇನೆ ಎಂದು ಹೇಳಿದ್ದಾರೆ.
ನಾನು ಹುಟ್ಟಿ ಬೆಳೆದ ಪ್ರದೇಶದಿಂದಲೇ ಚುನಾವಣೆ ಎದುರಿಸುತ್ತಿದ್ದೇನೆ, ಇದು ನಾನು ಪಡೆದಿರುವುದನ್ನು ಜನತೆಗೆ ವಾಪಸ್ ನೀಡುವ ಸಮಯ, ಆದ್ದರಿಂದ ಜನರ ಧ್ವನಿಯನ್ನು ಸಂಸತ್ ನಲ್ಲಿ ಪ್ರತಿನಿಧಿಸಲು ಬಯಸುತ್ತಿದ್ದೇನೆ ಎಂದು ಹೇಳಿದ್ದಾರೆ. ಇದೇ ವೇಳೆ ರಾಮ ಮಂದಿರ ವಿಷಯದ ಬಗ್ಗೆಯೂ ಪ್ರಕಾಶ್ ರಾಜ್ ಮಾತನಡಿದ್ದು ದೆಹಲಿ, ಲಖನೌ ಎಸಿ ರೂಮ್ ಗಳಲ್ಲಿ ರಾಮ ಮಂದಿರದ ರಾಜಕೀಯ ನಡೆಯುತ್ತಿದೆ ಎಂದು ಹೇಳಿದ್ದಾರೆ.