ದೇಶ

ಎಚ್1ಎನ್1 ಸೋಂಕಿನಿಂದ ಬಳಲುತ್ತಿದ್ದ ಅಮಿತ್ ಶಾ ಆಸ್ಪತ್ರೆಯಿಂದ ಡಿಸ್ಟಾರ್ಜ್!

Srinivasamurthy VN
ನವದೆಹಲಿ: ಎಚ್1ಎನ್1 ಸೋಂಕಿಗೆ ತುತ್ತಾಗಿ ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಭಾಗಶಃ ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಭಾನುವಾರ ಡಿಸ್ಚಾರ್ಜ್ ಆಗಿದ್ದಾರೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಬಿಜೆಪಿ ಪಕ್ಷ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ಅಮಿತ್ ಶಾ ಅವರ ಸೋಂಕು ಬಹುತೇಕ ನಿವಾರಣೆಯಾಗಿದ್ದು ಅವರನ್ನು ಆಸ್ಪತ್ರೆಯಿಂದ ಮನೆಗೆ ಕಳುಹಿಸಿಕೊಡಲಾಗಿದೆ. ಶೀಘ್ರ ಅವರು ಪಕ್ಷದ ಕೆಲಸಗಳಲ್ಲಿ ತೊಡಗಲಿದ್ದಾರೆ ಎಂದು ಹೇಳಿದೆ.
ಈ ಬಗ್ಗೆ ಮಾತನಾಡಿರುವ ಬಿಜೆಪಿ ಮುಖಂಡ ಅನಿಲ್ ಬಲೂನಿ ಅವರು, ಕಳೆದ ಬುಧವಾರ ಎಚ್1ಎನ್1 ಸೋಂಕಿನಿಂದಾಗಿ ಅಮಿತ್ ಶಾ ಅವರು ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಸತತ 4 ದಿನಗಳ ಚಿಕಿತ್ಸೆ ಬಳಿಕ ಶಾ ಗುಣಮುಖರಾಗಿದ್ದು, ಅವರನ್ನು ವೈದ್ಯರು ಮನೆಗೆ ಕಳುಹಿಸಿಕೊಟ್ಟಿದ್ದಾರೆ. ಏಮ್ಸ್ ಆಸ್ಪತ್ರೆಯ ನಿರ್ದೇಶಕ ಡಾ.ರಣದೀಪ್ ಗುಲೇರಿಯಾ ಅವರ ನೇತೃತ್ವದಲ್ಲಿ ಅಮಿತ್ ಶಾ ಅವರಿಗೆ ಚಿಕಿತ್ಸೆ ನೀಡಲಾಗಿದ್ದು, ವೈದ್ಯರು ಶಾ ಅವರು ಸಂಪೂರ್ಣ ಗುಣಮುಖರಾಗಿದ್ದಾರೆ. ಅವರನ್ನು ಮನೆಗೆ ಕರೆದುಕೊಂಡು ಹೋಗಬಹುದು ಎಂದು ಹೇಳಿದ ಬಳಿಕವೇ ಅವರನ್ನು ಮನೆಗೆ ವಾಪಸ್ ಕರೆದುಕೊಂಡು ಬರಲಾಗಿದೆ ಎಂದು ಮಾಹಿತಿ ನೀಡಿದರು.
ಈ ಹಿಂದೆ ಸ್ವತಃ ಅಮಿತ್ ಶಾ ಅವರೇ ತಮಗೆ ಎಚ್1ಎನ್1 ಸೋಂಕು ತಗುಲಿರುವ ಕುರಿತು ಟ್ವಿಟರ್ ನಲ್ಲಿ ಟ್ವೀಟ್ ಮಾಡಿದ್ದರು.
SCROLL FOR NEXT