ಮಧ್ಯ ಪ್ರದೇಶ ಪೊಲೀಸರಿಂದ ಮಾಹಿತಿ 
ದೇಶ

ಆರೆಸ್ಸೆಸ್ ಕಾರ್ಯಕರ್ತನ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್; ಸತ್ತವನೇ ನಿಜವಾದ ಕೊಲೆಗಾರ!

ಆರ್ ಎಸ್ ಎಸ್ ಕಾರ್ಯಕರ್ತನ ಹತ್ಯೆ ಪ್ರಕರಣಕ್ಕೆ ಬಹುದೊಡ್ಡ ಟ್ವಿಸ್ಟ್ ದೊರಕಿದ್ದು, ಕೊಲೆಯಾದವನೇ ಕೊಲೆಗಾರ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಅರೆ.. ಕೊಲೆಯಾದವನೇ ಕೊಲೆಗಾರನೇ..? ಅದು ಹೇಗೆ ಸಾಧ್ಯ ಎಂಬುದು ನಿಮ್ಮ ಪ್ರಶ್ನೆಯಾದರೆ ಈ ಸುದ್ದಿಯನ್ನು ಸಂಪೂರ್ಣವಾಗಿ ಓದಿ..

ಭೋಪಾಲ್: ಕಳೆದ ವಾರ ಸಂಭವಿಸಿದ್ದ ಆರ್ ಎಸ್ ಎಸ್ ಕಾರ್ಯಕರ್ತನ ಹತ್ಯೆ ಪ್ರಕರಣಕ್ಕೆ ಬಹುದೊಡ್ಡ ಟ್ವಿಸ್ಟ್ ದೊರಕಿದ್ದು, ಕೊಲೆಯಾದವನೇ ಕೊಲೆಗಾರ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಅರೆ.. ಕೊಲೆಯಾದವನೇ ಕೊಲೆಗಾರನೇ..? ಅದು ಹೇಗೆ ಸಾಧ್ಯ ಎಂಬುದು ನಿಮ್ಮ ಪ್ರಶ್ನೆಯಾದರೆ ಈ ಸುದ್ದಿಯನ್ನು ಸಂಪೂರ್ಣವಾಗಿ ಓದಿ..
ಕಳೆದವಾರ ಮಧ್ಯ ಪ್ರದೇಶದಲ್ಲಿ ಭಾರಿ ಸುದ್ದಿಗೆ ಗ್ರಾಸವಾಗಿದ್ದ ಮತ್ತು ತೀವ್ರ ಪ್ರತಿಭಟನೆಗೆ ಕಾರಣವಾಗಿದ್ದ ಆರ್ ಎಸ್ ಎಸ್ ಕಾರ್ಯಕರ್ತ  ಹಿಮ್ಮತ್ ಪಾಟೀದಾರ್​ ಹತ್ಯೆ ಪ್ರಕರಣವನ್ನು ಭೇದಿಸುವಲ್ಲಿ ಕೊನೆಗೂ ಪೊಲೀಸರು ಯಶಸ್ವಿಯಾಗಿದ್ದಾರೆ. 
ಪೊಲೀಸ್ ತನಿಖೆ ಬಳಿಕ ಕೊಲೆಯಾಗಿದ್ದಾನೆ ಎಂದು ತಿಳಿದಿದ್ದ ಮಧ್ಯಪ್ರದೇಶದ ರತ್ಲಮ್ ಜಿಲ್ಲೆಯ 36 ವರ್ಷದ ಹಿಮ್ಮತ್ ಪಾಟಿದಾರ್ ಜೀವಂತವಾಗಿರುವ ವಿಷಯ ಬೆಳಕಿಗೆ ಬಂದಿದೆ. ವಾಸ್ತವವಾಗಿ ಕೊಲೆಯಾಗಿದ್ದೇ ಬೇರೆ. ಇನ್ಷೂರೆನ್ಸ್ ಹಣಕ್ಕಾಗಿ ಹಿಮ್ಮತ್ ಪಾಟೀದಾರ್ ಸೃಷ್ಟಿಸಿದ ಮಹಾ ನಾಟಕ ಅದಾಗಿತ್ತು. ತನ್ನ ತೋಟದಲ್ಲಿ ಕೆಲಸ ಮಾಡುತ್ತಿದ್ದ ಮದನ್ ಮಾಳವೀಯ(32 ವರ್ಷ) ಎಂಬಾತನನ್ನು ಹತ್ಯೆ ಮಾಡಿ, ಆ ಶವ ತನ್ನದೆಂದು ಹಿಮ್ಮತ್ ಪಾಟಿದಾರ್ ಬಿಂಬಿಸಿದ್ದನೆಂದು ಪೊಲೀಸರು ಹೇಳಿದ್ದಾರೆ. ತನಿಖೆ ವೇಳೆ ಶವದ ಡಿಎನ್​ಎ ಪರೀಕ್ಷೆ ನಡೆಸಿದ್ದ ಪೊಲೀಸರಿಗೆ ಈ ಮಾಹಿತಿ ದೊರೆತಿದ್ದು, ಪ್ರಸ್ತುತ ಪರಾರಿಯಾಗಿರುವ ಹಿಮ್ಮತ್ ಪಾಟೀದಾರ್ ನನ್ನು ಪೊಲೀಸರು ಸದ್ಯ ಹುಡುಕುತ್ತಿದ್ದಾರೆ.
ಏನಿದು ಪ್ರಕರಣ?
ಜನವರಿ 23ರಂದು ರತ್ಲಮ್ ಜಿಲ್ಲೆಯ ಕಾಮೆದ್ ಎಂಬ ಗ್ರಾಮದ ಹೊಲದಲ್ಲಿ ಶವವೊಂದು ಪತ್ತೆಯಾಗಿತ್ತು. ಓರ್ವ ವ್ಯಕ್ತಿಯನ್ನು ಕತ್ತು ಸೀಳಿ ಭೀಕರವಾಗಿ ಕೊಲೆ ಮಾಡಲಾಗಿತ್ತು.ಅಲ್ಲದೆ ಮುಖವನ್ನು ಗುರುತು ಸಿಗದಂತೆ ಸುಟ್ಟುಹಾಕಲಾಗಿತ್ತು. ಆದರೆ, ದೇಹದ ಆಕಾರ, ಬಟ್ಟೆ ಎಲ್ಲವೂ ಹಿಮ್ಮತ್ ಪಾಟೀದಾರ್ ಗೆ ಹೋಲಿಕೆಯಾಗುತ್ತಿತ್ತು. ಹಿಮ್ಮತ್  ಪಾಟೀದಾರ್ ಅವರ ತಂದೆಯು ತಮ್ಮ ಮಗ ಕೊಲೆಯಾಗಿದ್ಧಾನೆಂದು ಪೊಲೀಸರಿಗೆ ದೂರು ಕೊಡುತ್ತಾರೆ. ಅಲ್ಲಿಗೆ, ಆರೆಸ್ಸೆಸ್ ಕಾರ್ಯಕರ್ತನ ಬರ್ಬರ ಹತ್ಯೆ ನಡೆದಿದೆ ಎಂದು ಈ ಪ್ರಕರಣವು ರಾಜಕೀಯ ಬಣ್ಣ ಪಡೆಯುತ್ತದೆ. ವಿಪಕ್ಷದಲ್ಲಿರುವ ಬಿಜೆಪಿಗೆ ಸರ್ಕಾರದ ಮೇಲೆ ಹರಿಹಾಯಲು ಹೊಸ ಅಸ್ತ್ರ ಸಿಗುತ್ತದೆ. ಬಿಜೆಪಿ ನಾಯಕರು ಹೇಳಿಕೆ ಮೇಲೆ ಹೇಳಿಕೆ ಕೊಟ್ಟು ಕಾಂಗ್ರೆಸ್ ಸರ್ಕಾರದ ಮೇಲೆ ವಾಗ್ದಾಳಿ ಕೂಡ ನಡೆಸಿದ್ದರು.
ಆದರೆ, ಕೆಲವೇ ದಿನಗಳಲ್ಲಿ ಪೊಲೀಸರಿಗೆ ಈ ಪ್ರಕರಣದಲ್ಲಿ ಸಂಶಯಗಳು ಕಾಣತೊಡಗುತ್ತವೆ. ಶವದ ಸಮೀಪದಲ್ಲಿ ದೊರೆತಿದ್ದ ಡೈರಿಯೊಂದು ಹಲವು ಸುಳಿವನ್ನು ಬಿಟ್ಟುಕೊಡುತ್ತದೆ. ಆ ಡೈರಿಯಲ್ಲಿ ಪಾಟೀದಾರ್ ನ ಇನ್ಷೂರೆನ್ಸ್ ಪಾಲಿಸಿ ನಂಬರ್, ಬ್ಯಾಂಕ್ ನ ಫಿಕ್ಸೆಡ್ ಡೆಪಾಸಿಟ್, ಪಿನ್ ನಂಬರ್ ಇತ್ಯಾದಿ ವಿವರಗಳಿರುತ್ತವೆ. ಅಷ್ಟೇ ಅಲ್ಲದೆ, ಶವದಲ್ಲಿದ್ದ ಮೊಬೈಲ್ ಫೋನ್ ನಲ್ಲಿ ದೂರವಾಣಿ ಕರೆಯ ವಿವರವನ್ನೆಲ್ಲಾ ಅಳಿಸಿಹಾಕಲಾಗಿರುತ್ತದೆ. ಇದು ಪೊಲೀಸರಿಗೆ ಸಂಶಯದ ವಾಸನೆ ಬಿತ್ತಿ, ಶವದ ಡಿಎನ್​ಎ ಪರೀಕ್ಷೆಗೆ ದಾರಿ ಮಾಡಿಕೊಡುತ್ತದೆ.
ಶವದ ಡಿಎನ್​ಎಗೂ ಹಿಮ್ಮತ್ ಪಾಟೀದಾರ್​ನ ತಂದೆಯ ಡಿಎನ್​ಎಗೂ ಹೊಂದಿಕೆಯಾಗುವುದಿಲ್ಲ. ಆಗ ಪೊಲೀಸರಿಗೆ ಪ್ರಕರಣದಲ್ಲಿ ಹೊಸ ಟ್ವಿಸ್ಟ್ ಸಿಕ್ಕಂತಾಗುತ್ತದೆ. ಈ ಹತ್ಯೆ ಘಟನೆ ನಡೆಯುವ ಒಂದು ದಿನ ಮೊದಲಷ್ಟೇ ಪಾಟೀದಾರ್ ನ ತೋಟದಲ್ಲಿ ಕೆಲಸ ಮಾಡುವ ಕೂಲಿ ಮದನ್ ಮಾಳವೀಯ ಎಂಬಾತ ನಾಪತ್ತೆಯಾಗಿರುತ್ತಾನೆ. ಈ ಕೂಲಿಕಾರನ ಸಂಬಂಧಿಕರ ಡಿಎನ್​ಎ ಜೊತೆ ತಾಳೆ ಮಾಡುತ್ತಾರೆ. ಆಗ ಎರಡೂ ಡಿಎನ್​ಎ ಹೊಂದಿಕೆಯಾಗುವುದರೊಂದಿಗೆ ಪೊಲೀಸರಿಗೆ ಸ್ಪಷ್ಟ ಸುಳಿವು ಸಿಕ್ಕುತ್ತದೆ. ನಂತರ, ಮದನ್​ ಹೆಂಡತಿ ಕೂಡ ಶವದ ಗುರುತು ಹಿಡಿದು ಅದು ತನ್ನ ಗಂಡನದೇ ಎಂದು ಪತ್ತೆ ಹಚ್ಚುತ್ತಾರೆ.
ಇನ್ಷೂರೆನ್ಸ್​ಗಾಗಿ ನಡೆದ ಕೊಲೆ
ತೀವ್ರ ಆರ್ಥಿಕ ಸಂಕಷ್ಟದಲ್ಲಿದ್ದ ಹಿಮ್ಮತ್ ಪಾಟೀದಾರ್, ಈ ಸಮಸ್ಯೆಯಿಂದ ಹೊರಬರಲು ಮಹಾ ಷಡ್ಯಂತ್ರ ರಚಿಸುತ್ತಾನೆ. 20 ಲಕ್ಷ ಮೊತ್ತದ ಇನ್ಷೂರೆನ್ಸ್ ಪಡೆಯಲು ತನ್ನ ಸಾವಿನ ನಾಟಕ ಆಡಿದ್ದಾನೆಂಬುದು ಪೊಲೀಸರ ಶಂಕೆ. ಅದಕ್ಕಾಗಿ ತನ್ನ ತೋಟದಲ್ಲಿ ಕೆಲಸ ಮಾಡುವ ಮದನ್ ನನ್ನು ಹತ್ಯೆ ಮಾಡಿ, ಅದು ತನ್ನದೇ ಶವ ಎಂದು ಬಿಂಬಿಸುವ ಪ್ರಯತ್ನ ಮಾಡುತ್ತಾನೆ. ತನ್ನ ಕೆಲ ವಸ್ತುಗಳನ್ನ ಶವದ ಬಳಿ ಬೇಕಂತಲೇ ಬಿಟ್ಟು ಹೋಗುತ್ತಾನೆ. 
ಪೊಲೀಸರಿಗೆ ಸುಳಿವು ನೀಡಿದ್ದ ಚಡ್ಡಿ!
ಹಿಮ್ಮತ್ ಪಾಟಿದಾರ್ ಆ ಶವ ತನ್ನದೇ ಎಂದು ಬಿಂಬಿಸಲು ಶವದ ಮೇಲಿನ ಬಟ್ಟೆಗಳನ್ನು ತೆಗೆದು ತನ್ನ ಬಟ್ಟೆಗಳೊಂದಿಗೆ ಬದಲಿಸುತ್ತಾನೆ. ಆದರೆ, ಶವದ ಬಟ್ಟೆಯನ್ನ ಬದಲಿಸುವ ಹಿಮ್ಮತ್, ಚೆಡ್ಡಿಯನ್ನ ಮಾತ್ರ ಹಾಗೆಯೇ ಬಿಟ್ಟಿರುತ್ತಾನೆ. ಪ್ರಕರಣದಲ್ಲಿ ಸುಳಿವು ನೀಡಿದವುಗಳಲ್ಲಿ ಈ ಚೆಡ್ಡಿಯೂ ಒಂದು. ಆದರೆ, ಪೊಲೀಸರಿಗೆ ಸದ್ಯಕ್ಕೆ ಸ್ಪಷ್ಟವಾಗಿರುವ ಸಂಗತಿ ಎಂದರೆ ಕೊಲೆಯಾಗಿರುವುದು ಮದನ್ ಮಾಳವೀಯ ಎಂಬ ವ್ಯಕ್ತಿ. ಹಾಗೆಯೇ, ಶವಕ್ಕೆ ಹಿಮ್ಮತ್​ನ ಬಟ್ಟೆಗಳನ್ನ ತೊಡಿಸಿ ಬೇರೆಯೇ ಸಂಚು ರೂಪಿಸಿರುವುದು ಖಚಿತವಾಗಿದೆ.
ಈಗ ನಾಪತ್ತೆಯಾಗಿರುವ ಹಿಮ್ಮತ್ ಪಾಟೀದಾರ್ ನನ್ನು ಹಿಡಿಯಲು ಪೊಲೀಸರು ಬಲೆಬೀಸಿದ್ದಾರೆ. ಈತನ ಸುಳಿವು ನೀಡಿದವರಿಗೆ 10 ಸಾವಿರ ರೂ ಬಹುಮಾನ ಕೊಡುವುದಾಗಿಯೂ ಪೊಲೀಸರು ಘೋಷಿಸಿದ್ದಾರೆ. ಈ ಮಹಾ ನಾಟಕದಲ್ಲಿ ಹಿಮ್ಮತ್ ನ ಕುಟುಂಬ ಸದಸ್ಯರೂ ಭಾಗಿಯಾಗಿದ್ದಾರಾ ಎಂಬ ದೃಷ್ಟಿಯಿಂದಲೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಯಾರು ಈ ಹಿಮ್ಮತ್?
ಹಿಮ್ಮತ್ ಪಾಟೀದಾರ್ ಮತ್ತವನ ಕುಟುಂಬದವರು ಆರೆಸ್ಸೆಸ್ ಕಾರ್ಯಕರ್ತರಾಗಿದ್ದಾರೆ. ಹಿಮ್ಮತ್ ಆರೆಸ್ಸೆಸ್ ಶಾಖೆಗೆ ಹೋಗುತ್ತಿದ್ದರಾದರೂ ಸಕ್ರಿಯ ಕಾರ್ಯಕರ್ತನಾಗಿರಲಿಲ್ಲ. ಈತನ ಸೋದರ ಸಂಜಯ್ ಪಾಟೀದಾರ್ ಆರೆಸ್ಸೆಸ್ ಕಾರ್ಯಕರ್ತ ಎನ್ನಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತೀಯ ನಾವಿಕರ ಸುರಕ್ಷತೆ ಮುಖ್ಯ; ನಾಗರಿಕ ಮೂಲಸೌಕರ್ಯಗಳ ಮೇಲಿನ ದಾಳಿ ಸ್ವೀಕಾರಾರ್ಹವಲ್ಲ: ಇರಾನ್‌ಗೆ ಅಜಿತ್ ದೋವಲ್

ಜರ್ಮನಿಯ ವಸತಿ ಕಟ್ಟಡದಲ್ಲಿ ಶಂಕಿತ ಬೆಂಕಿ ಅವಘಡ: 3 ಭಾರತೀಯರು ಸಾವು!

ಹನಿಟ್ರ್ಯಾಪ್ ಪಿತೂರಿ ಪ್ರಶ್ನಿಸಿದ್ದಕ್ಕೆ ಕಿರುಕುಳ; JDS ಕಾರ್ಯಕರ್ತ CCB ವಶಕ್ಕೆ: ಕುಮಾರಸ್ವಾಮಿ ಆಕ್ರೋಶ

ಕಾಂಗ್ರೆಸ್‌ನ ಆಂತರಿಕ ಕಲಹದಿಂದ 'ಮೂರನೇ ಮುಖ್ಯಮಂತ್ರಿ' ಬಂದರೂ ಅಚ್ಚರಿ ಇಲ್ಲ: ಬಿ.ವೈ ವಿಜಯೇಂದ್ರ; Video

ಯೂಟ್ಯೂಬರ್ ಧ್ರುವ್ ರಾಠಿಗೆ ಸಂಕಷ್ಟ: 8 ವರ್ಷಗಳ ಹಿಂದಿನ ಪ್ರಕರಣಕ್ಕೆ ಮರುಜೀವ; ದೆಹಲಿ ಕೋರ್ಟ್ ಸಮನ್ಸ್!