ದೇಶ

2017-18ನೇ ಹಣಕಾಸು ವರ್ಷದಲ್ಲಿ ಆರ್ಥಿಕ ವೃದ್ಧಿ ದರ ಶೇ, 7.2ಕ್ಕೆ ಪರಿಷ್ಕರಿಸಿದ ಕೇಂದ್ರ ಸರ್ಕಾರ

Nagaraja AB

ನವದೆಹಲಿ: 2017- 18ನೇ  ಹಣಕಾಸು ವರ್ಷದ ಆರ್ಥಿಕ ವೃದ್ದಿ ದರವನ್ನು ಕೇಂದ್ರ ಸರ್ಕಾರ ಇಂದು ಪರಿಷ್ಕರಿಸಿದ್ದು, ಶೇ. 6.7 ರಿಂದ ಶೇ. 7.2ಕ್ಕೆ ಏರಿಕೆ ಮಾಡಿದೆ.

2011-12ರ ಸ್ಥಿರ ಬೆಲೆ ಆಧರಿಸಿದ 2017-18 ಮತ್ತು 2016-17 ನೇ ಹಣಕಾಸು ವರ್ಷಗಳ ನೈಜ ಒಟ್ಟು ದೇಶಿಯ ಉತ್ಪನ್ನ (ಜೆಡಿಪಿ) ಬೆಳವಣಿಗೆ ದರವು, ಕ್ರಮವಾಗಿ 131. 80 ಲಕ್ಷ ಕೋಟಿ ರೂ. ಹಾಗೂ 122.98 ಲಕ್ಷ ಕೋಟಿ ಆಗಿದೆ. ಹೀಗಾಗಿ ಈ ಎರಡೂ ಹಣಕಾಸು ವರ್ಷಗಳಲ್ಲಿನ ವೃದ್ಧಿ ದರವು ಕ್ರಮವಾಗಿ ಶೇ, 7.2 ಹಾಗೂ ಶೇ, 8. 2 ರಷ್ಟು ದಾಖಲಾಗಿದೆ ಎಂದು ಕೇಂದ್ರ ಸಾಂಖ್ಯಿಕ ಕಚೇರಿ (ಸಿಎಸ್ ಒ) ತಿಳಿಸಿದೆ.

ಈ ಹಿಂದೆ ಕೇಂದ್ರ ಸಾಂಖ್ಯಿಕ  ಕಚೇರಿಯು 2018-19 ನೇ ಸಾಲಿನ ಜೆಡಿಪಿ ಬೆಳವಣಿಗೆ ದರವು ಶೇ, 7.2 ರಷ್ಟು ಇರಲಿದೆ ಎಂದು ಹೇಳಿತ್ತು.

2017-18ರ ಮೊದಲ ಪರಿಷ್ಕೃತ ಅಂದಾಜುಗಳು 2017 ರ ಮೇ 31 ರಂದು ಬಿಡುಗಡೆಯಾದ ತಾತ್ಕಾಲಿಕ ಅಂದಾಜುಗಳ ಸಮಯದಲ್ಲಿ  ಬೆಂಚ್ಮಾರ್ಕ್-ಸೂಚಕ ವಿಧಾನವನ್ನು ಬಳಸುವ ಬದಲು ಉದ್ಯಮ,  ಸಂಸ್ಥೆ-ಆಧಾರಿತ ವಿವರವಾದ ಮಾಹಿತಿಯನ್ನು ಬಳಸಿಕೊಂಡು ಸಂಕಲಿಸಲಾಗಿದೆ ಎಂದು ಕೇಂದ್ರ ಸಾಂಖ್ಯಿಕ ಕಚೇರಿ ತಿಳಿಸಿದೆ.

2016-17 ನೇ ಸಾಲಿನ ಉಳಿತಾಯ  ಮತ್ತು ಬಂಡವಾಳ ರಚನೆ,  ಬಳಕೆ ವೆಚ್ಚ, ರಾಷ್ಟ್ರೀಯ ಆದಾಯದ ಎರಡನೇ ಪರಿಷ್ಕೃತ ಅಂದಾಜುಗಳನ್ನು ಸಹ ಸಿಎಸ್ ಓ ಬಿಡುಗಡೆ ಮಾಡಿದೆ.

2017-18ರ ಅವಧಿಯಲ್ಲಿನ  ಪ್ರಾಥಮಿಕ , ದ್ವೀತಿಯ ಹಾಗೂ ತೃತೀಯ ಸೇವೆಗಳ ಅಭಿವೃದ್ದಿ ದರದ ಅಂದಾಜು ಕ್ರಮವಾಗಿ ಶೇ, 5, ಶೇ. 6 ಮತ್ತು ಶೇ, 8.1 ರಷ್ಟಿದೆ. ಹಿಂದಿನ ವರ್ಷದಲ್ಲಿ  ಪ್ರಾಥಮಿಕ ವಲಯದ ಆರ್ಥಿಕ ಬೆಳವಣಿಗೆ ದರ ಶೇ, 6.8 ರಷ್ಟಿದ್ದರೆ ದ್ವೀತಿಯ ಕ್ಷೇತ್ರಗಳ ಬೆಳವಣಿಗೆ ದರ ಶೇ, 7.5 ಹಾಗೂ ತೃತೀಯ ವಲಯದ ವೃದ್ಧಿ ದರ ಶೇ. 8.4 ರಷ್ಟಿತ್ತು.

SCROLL FOR NEXT