ದೇಶ

ಕಾಂಗ್ರೆಸ್ ಮನವಿ ತಿರಸ್ಕರಿಸಿದ ಡಿಎಂಕೆ, ಮನಮೋಹನ್ ಸಿಂಗ್ ಗೆ ರಾಜ್ಯಸಭಾ ಸ್ಥಾನ ಕಲ್ಪಿಸಲು ನಕಾರ

Lingaraj Badiger
ಚೆನ್ನೈ: ತಮಿಳುನಾಡು ವಿಧಾನಸಭೆಯಿಂದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ರಾಜ್ಯಸಭೆಗೆ ಆಯ್ಕೆ ಮಾಡುವಂತೆ ಕಾಂಗ್ರೆಸ್ ಮಾಡಿದ್ದ ಮನವಿಯನ್ನು ಮಿತ್ರ ಪಕ್ಷ ಡಿಎಂಕೆ ತಿರಸ್ಕರಿಸಿದೆ. 
ಡಿಎಂಕೆ ಸೋಮವಾರ ಪಕ್ಷದಿಂದ ರಾಜ್ಯಸಭೆಗೆ ಇಬ್ಬರ ಹೆಸರನ್ನು ಅಂತಿಮಗೊಳಿಸಿದೆ. ಇದಕ್ಕು ಮುನ್ನ ಡಿಎಂಕೆ ಬೆಂಬಲದೊಂದಿಗೆ ಮಾಜಿ ಪ್ರಧಾನಿ ಸಿಂಗ್ ಅವರು ಕಣಕ್ಕಿಳಿಯಲಿದ್ದಾರೆ ಎನ್ನಲಾಗಿತ್ತು.
ಇದೀಗ ಕಾಂಗ್ರೆಸ್ ನಿರೀಕ್ಷೆ ಸುಳ್ಳಾಗಿದ್ದು, ಡಿಎಂಕೆ ಅಧ್ಯಕ್ಷ ಎಂಕೆ ಸ್ಟಾಲಿನ್ ಅವರು ತಮ್ಮ ಪಕ್ಷದಿಂದ ಇಬ್ಬರನ್ನು ಆಯ್ಕೆ ಮಾಡಿ, ಮೂರನೇ ಸ್ಥಾನವನ್ನು ಮಿತ್ರ ಪಕ್ಷ ಎಂಡಿಎಂಕೆಗೆ ಬಿಟ್ಟುಕೊಟ್ಟಿದ್ದಾರೆ.
ಜುಲೈ 18ರಂದು ನಡೆಯುವ ರಾಜ್ಯಸಭೆ ಚುನಾವಣೆಗೆ ಡಿಎಂಕೆ ನಾಯಕ ಎಂ ಶಣ್ಮುಗಂ ಹಾಗೂ ಹಿರಿಯ ವಕೀಲ ಪಿ ವಿಲ್ಸನ್ ಅವರನ್ನು ಪಕ್ಷದ ಅಭ್ಯರ್ಥಿಗಳಾಗಿ ಆಯ್ಕೆ ಮಾಡಲಾಗಿದೆ. ಮತ್ತೊಂದು ಸ್ಥಾನವನ್ನು ಲೋಕಸಭಾ ಚುನಾವಣಾ ಪೂರ್ವ ಮೈತ್ರಿ ಮಾತುಕತೆಯಂತೆ ಎಂಡಿಎಂಕೆಗೆ ಬಿಟ್ಟುಕೊಡಲಾಗಿದೆ ಎಂದು ಸ್ಟಾಲಿನ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮನಮೋಹನ್ ಸಿಂಗ್ ಅವರು ಇದುವರೆಗೆ ಅಸ್ಸಾಂ ವಿಧಾನಸಭೆಯಿಂದ ರಾಜ್ಯಸಭೆಗೆ ಆಯ್ಕೆಯಾಗುತ್ತಿದ್ದರು. ಆದರೆ ಈ ಬಾರಿ ಅಸ್ಸಾಂನಲ್ಲಿ ಕಾಂಗ್ರೆಸ್ ಗೆ ಸಂಖ್ಯಾಬಲದ ಕೊರತೆ ಇರುವ ಹಿನ್ನೆಲೆಯಲ್ಲಿ ಡಿಎಂಕೆ ಬೆಂಬಲದೊಂದಿಗೆ ಮಾಜಿ ಪ್ರಧಾನಿಯನ್ನು ತಮಿಳುನಾಡಿನಿಂದ ರಾಜ್ಯಸಭೆಗೆ ಆಯ್ಕೆ ಮಾಡಲು ಬಯಸಿತ್ತು. ಆದರೆ ಡಿಎಂಕೆ ಕಾಂಗ್ರೆಸ್ ಮನವಿಯನ್ನು ಸ್ಪಷ್ಟವಾಗಿ ತಳ್ಳಿಹಾಕಿದೆ.
SCROLL FOR NEXT