ಜಮ್ಮು: ಜಮ್ಮು-ಕಾಶ್ಮೀರದ ಕಿಶ್ತ್ವಾರ ಜಿಲ್ಲೆಯಲ್ಲಿ ಸೋಮವಾರ ಬೆಳ್ಳಂಬೆಳಗ್ಗೆ ಜವರಾಯ ಅಟ್ಟಹಾಸ ಮೆರೆದಿದ್ದು ಪ್ರಯಾಣಿಕರಿಂದ ಕಿಕ್ಕಿರಿದು ತುಂಬಿದ್ದ ಮಿನಿಬಸ್ಸು ಕಣಿವೆ ಜಿಲ್ಲೆ ಕಿಶ್ತ್ವಾರ ಜಿಲ್ಲೆಯಲ್ಲಿ ಆಳವಾದ ಕಂದಕಕ್ಕೆ ಉರುಳಿಬಿದ್ದ ಪರಿಣಾಮ 33 ಮಂದಿ ಪ್ರಯಾಣಿಕರು ಮೃತಪಟ್ಟಿದ್ದಾರೆ.
ಕೇಶ್ವನ್ ನಿಂದ ಕಿಶ್ತ್ವಾರಕ್ಕೆ ಬರುತ್ತಿದ್ದ ಕಿಕ್ಕಿರಿದು ತುಂಬಿದ್ದ ಮಿನಿಬಸ್ ದಾಖಲಾತಿ ಸಂಖ್ಯೆ ಜೆಕೆ 176787 ರಸ್ತೆಯಲ್ಲಿ ಸ್ಕಿಡ್ ಆಗಿ ಕೇಶ್ವಾನ್-ತಕ್ರೈ ಪ್ರದೇಶದಲ್ಲಿ ಮೇಲಿನಿಂದ ಉರುಳಿ ಬಿದ್ದು 35 ಮಂದಿ ಮೃತಪಟ್ಟು 22 ಪ್ರಯಾಣಿಕರಿಗೆ ಗಾಯಗಳಾಗಿವೆ ಎಂದು ಕಿಶ್ತ್ವಾರ್ ಜಿಲ್ಲಾಧಿಕಾರಿ ಅಂಗ್ರೆಝ್ ಸಿಂಗ್ ರಾಣಾ ತಿಳಿಸಿದ್ದಾರೆ,
ಇದುವರೆಗೆ 33 ಪ್ರಯಾಣಿಕರ ಮೃತದೇಹಗಳನ್ನು ಹೊರತೆಗೆಯಲಾಗಿದೆ ಎಂದು ಜಮ್ಮು ಐಜಿಪಿ ಎಂ ಕೆ ಸಿನ್ಹಾ ತಿಳಿಸಿದ್ದಾರೆ. ದುರ್ಘಟನೆಯಾದ ತಕ್ಷಣ ಸ್ಥಳೀಯರು, ಪೊಲೀಸರು ಮತ್ತು ಭದ್ರತಾ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ರಕ್ಷಣಾ ಕಾರ್ಯದಲ್ಲಿ ನಿರತರಾಗಿದ್ದಾರೆ.
ಗಾಯಗೊಂಡವರಲ್ಲಿ ಸುಮಾರು 20 ಪ್ರಯಾಣಿಕರನ್ನು ಸ್ಥಳೀಯ ಆಸ್ಪತ್ರೆಗೆ ವಿಶೇಷ ಚಿಕಿತ್ಸೆಗೆ ದಾಖಲಿಸಲಾಗಿದೆ. ಗಾಯಗೊಂಡವರಲ್ಲಿ ಹಲವರ ಸ್ಥಿತಿ ಚಿಂತಾಜನಕವಾಗಿರುವುದರಿಂದ ಮೃತಪಟ್ಟವರ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ವಾರ ಸಹ ಕಾಶ್ಮೀರದ ಶೋಪಿಯಾನ್ ಜಿಲ್ಲೆಯ ಮುಘಲ್ ರಸ್ತೆಯಲ್ಲಿ ಕಳೆದ ವಾರ ಶಾಲಾ ಬಸ್ಸು ಅಪಘಾತಕ್ಕೀಡಾಗಿ 9 ಮಂದಿ ಬಾಲಕಿಯರು ಸೇರಿದಂತೆ 11 ಮಂದಿ ವಿದ್ಯಾರ್ಥಿಗಳು ಮೃತಪಟ್ಟಿದ್ದರು.
ಪ್ರಧಾನಿ ಸಂತಾಪ: ಬಸ್ ಅಪಘಾತ ಹೃದಯ ವಿದ್ರಾವಕ ದುರ್ಘಟನೆ. ಮೃತರ ಆತ್ಮಕ್ಕೆ ಸಂತಾಪಗಳು, ಅವರನ್ನು ಕಳೆದುಕೊಂಡ ಕುಟುಂಬದವರಿಗೆ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ, ಗಾಯಗೊಂಡವರು ಆದಷ್ಟು ಬೇಗನೆ ಗುಣಮುಖವಾಗಲಿ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಪ್ರತಿಕ್ರಿಯಿಸಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos