ದೇಶ

ಪುಣೆ: ಭಾರೀ ಮಳೆಯಿಂದ ಗೋಡೆ ಕುಸಿದು ಆರು ಕಾರ್ಮಿಕರು ದುರ್ಮರಣ

Nagaraja AB
ಪುಣೆ: ಮಹಾರಾಷ್ಟ್ರದ ಪುಣೆಯಲ್ಲಿ ಕಳೆದ 24 ಗಂಟೆಗಳಿಂದ ಎಡೆಬಿಡದೆ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಕಾಪೌಂಡ್ ವೊಂದರ ಗೋಡೆ ಕುಸಿದು ಆರು ಮಂದಿ ಕಾರ್ಮಿಕರು ಮೃತಪಟ್ಟಿದ್ದು, ಇತರ ಮೂವರು ಗಾಯಗೊಂಡಿರುವ ಘಟನೆ  ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ.
ಇಂದು ಬೆಳಗ್ಗೆ 1-15 ರ ಸುಮಾರಿನಲ್ಲಿ  ಸಿಂಹಗಡ್  ಕಾಲೇಜಿನ ಕಾಂಪೌಂಡ್ ಗೋಡೆ ಕುಸಿದು ಈ ದುರಂತ ಸಂಭವಿಸಿದೆ.ಕೂಡಲೇ ಬಿಲ್ಡರ್ ವಿರುದ್ಧ ಕ್ರಮ ಕೈಗೊಳ್ಳಲಾಗುವುದು, 287 ಸೈಟ್ ಗಳ ಅಪಾಯದ ಮೌಲ್ಯಮಾಪನ ಮಾಡಲಾಗಿದೆ. ಆದರೆ, ಅನುಮತಿ ಪಡೆಯದ ಕಾರಣ ಈ ಸೈಟಿನ ಮೌಲ್ಯಮಾಪನ ಮಾಡಲು ಆಗುವುದಿಲ್ಲ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ತಿಳಿಸಿದ್ದಾರೆ. 
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಎನ್ ಡಿಆರ್ ಎಫ್ ತಂಡದೊಂದಿಗೆ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಆರು ಮೃತದೇಹಗಳನ್ನು ಎನ್ ಡಿಆರ್ ಎಫ್ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ. ಮೃತರ ಹೆಸರು ದೃಢಪಟ್ಟಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
ಕೊಂಡ್ವಾ ಗೋಡೆ ಕುಸಿತ ಸಂಭವಿಸಿದ ಎರಡು ದಿನಗಳ ನಂತರ ಮತ್ತೊಂದು ಗೋಡೆ ಕುಸಿತ ಪ್ರಕರಣವಾಗಿದೆ. ಭಾರೀ ಮಳೆ ಹಿನ್ನೆಲೆಯಲ್ಲಿ ಇಂದು ಮುಂಬೈಯಲ್ಲಿ ಸಾರ್ವಜನಿಕ ರಜೆಯನ್ನು ಘೋಷಿಸಲಾಗಿದೆ.ಮಳೆಯ ಮುನ್ಸೂಚನೆ ಹಿನ್ನೆಲೆಯಲ್ಲಿ ತುರ್ತು ಕಾರಣಕ್ಕೆ ಹೊರತುಪಡಿಸಿ ಉಳಿದ ವೇಳೆಯಲ್ಲಿ ಮನೆಯಿಂದ ಹೊರಬರದಂತೆ ಜನರಿಗೆ ಸಲಹೆ ನೀಡಲಾಗಿದೆ.
SCROLL FOR NEXT