ದೇಶ

ಲೋಕಸಭೆಯಲ್ಲಿ ಆಧಾರ್ ಮಸೂದೆ ಅಂಗೀಕಾರ, ದುರ್ಬಳಕೆ ತಡೆಗೆ ಕಟ್ಟುನಿಟ್ಟಿನ ಕ್ರಮ ಎಂದ ಕೇಂದ್ರ

Lingaraj Badiger
ನವದೆಹಲಿ: ಬ್ಯಾಂಕ್ ಖಾತೆ ತೆರೆಯಲು ಹಾಗೂ ಸಿಮ್ ಕಾರ್ಡ್ ಖರೀದಿ ಸೇರಿದಂತೆ ಇತರೆ ಉದ್ದೇಶಗಳಿಗೆ ಸ್ವಯಂಪ್ರೇರಿತವಾಗಿ ಆಧಾರ್ ಕಾರ್ಡ್ ಅನ್ನು ಗುರುತಿನ ಸಾಕ್ಷ್ಯಕ್ಕೆ ಬಳಸಲು ಅವಕಾಶ ನೀಡುವ ಆಧಾರ್ ಮತ್ತು ಇತರೆ ಕಾನೂನುಗಳ ತಿದ್ದುಪಡಿ ಮಸೂದೆಯನ್ನು ಗುರುವಾರ ಲೋಕಸಭೆಯಲ್ಲಿ ಅಂಗೀಕರಿಸಲಾಗಿದೆ.
ಇಂದು ಲೋಕಸಭೆಯಲ್ಲಿ ಆಧಾರ್ ಮಸೂದೆ ಮಂಡಿಸಿ ಮಾತನಾಡಿದ ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ಅವರು, ಆಧಾರ್ ಕಾರ್ಡ್ ವ್ಯವಸ್ಥೆ ಸಂಪೂರ್ಣ ಸುರಕ್ಷಿತವಾಗಿದ್ದು, ಇದರ ದುರ್ಬಳಕೆ ತಡೆಯುವುದಕ್ಕಾಗಿ ಸರ್ಕಾರ ಎಲ್ಲಾ ರೀತಿಯ ಸುರಕ್ಷತಾ ಕ್ರಮಗಳನ್ನು ತೆಗೆದುಕೊಂಡಿದೆ ಎಂದರು.
ಸರ್ಕಾರದ ವಿವಿಧ ಕಲ್ಯಾಣ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ಮತ್ತು ಸಬ್ಸಿಡಿಗಳನ್ನು ಫಲಾನುಭವಿಗಳಿಗೆ ನೇರವಾಗಿ ಅವರ ಖಾತೆಗಳಿಗೆ ವರ್ಗಾಯಿಸಲು ಆಧಾರ್ ಯೋಜನೆ ನೆರವಾಗಿದೆ ಸಚಿವರು ಹೇಳಿದರು.
ತಿದ್ದುಪಡಿ ಮಸೂದೆಯಲ್ಲಿ ಗೌಪ್ಯತೆ ಮತ್ತು ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಅಲ್ಲದೆ ಆಧಾರ್ ಇಲ್ಲ ಎಂಬ ಕಾರಣಕ್ಕೆ ಯಾವುದೇ ಸೇವೆ ಅಥವಾ ಯೋಜನೆಯ ಲಾಭದಿಂದ ಯಾರೂ ವಂಚಿತರಾಗಬಾರದು ಎಂಬ ಅಂಶವನ್ನು ಒಳಗೊಂಡಿದೆ ಎಂದರು.
ಸದ್ಯ 123 ಕೋಟಿ ಭಾರತೀಯರು ಆಧಾರ್ ಬಳಸುತ್ತಿದ್ದು, ಐರಿಸ್ ಮತ್ತು ಫಿಂಗರ್ಪ್ರಿಂಟ್ ಡೇಟಾವನ್ನು ಭಾರತೀಯ ಯಂತ್ರೋಪಕರಣಗಳಲ್ಲಿ ಸಂಗ್ರಹಿಸಲಾಗಿದ್ದು, ಅದು ಸುರಕ್ಷಿತ ಮತ್ತು ಭದ್ರವಾಗಿದೆ ಎಂದು ರವಿಶಂಕರ್ ಪ್ರಸಾದ್ ಹೇಳಿದರು.
ಚರ್ಚೆಯ ಬಳಿಕ ಆಧಾರ್ ಮಸೂದೆಯನ್ನು ಧ್ವನಿಮತದ ಮೂಲಕ ಅಂಗೀಕರಿಸಲಾಯಿತು. ಈ ಮಸೂದೆ ಟೆಲಿಗ್ರಾಫ್ ಕಾಯ್ದೆ 1885 ಹಾಗೂ ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ 2002 ಅನ್ನು ತಿದ್ದುಪಡಿ ಮಾಡಲಿದೆ.
SCROLL FOR NEXT