ದೇಶ

ಪಾಕ್ ನಿಂದ ಹಫೀಜ್ ಸಯೀದ್ ಬಂಧನ ಹೇಳಿಕೆ: 'ಮೇಕಪ್ ತಂತ್ರ' ಎಂದ ಭಾರತ

Lingaraj Badiger
ನವದೆಹಲಿ: ಮುಂಬೈ ದಾಳಿಯ ರೂವಾರಿ ಹಫೀಜ್​ ಸಯೀದ್ ಹಾಗೂ ಆತನ 12 ಸಹಚರರನ್ನು ಶೀಘ್ರದಲ್ಲೇ ಬಂಧಿಸುವುದಾಗಿ ಗುರುವಾರ ಪಾಕಿಸ್ತಾನ ಪೊಲೀಸರು ಹೇಳಿದ್ದಾರೆ. ಆದರೆ ಪಾಕಿಸ್ತಾನದ ಈ ಹೇಳಿಕೆ ಮೇಕಪ್ ತಂತ್ರ ಎಂದು ಭಾರತ ಕಟುವಾಗಿ ಟೀಕಿಸಿದೆ.
ಉಗ್ರ ಸಂಘಟನೆಗೆ ಆರ್ಥಿಕ ಸಹಾಯ ಒದಗಿಸಲು ಐದು ಟ್ರಸ್ಟ್​ಗಳನ್ನು ಬಳಕೆ ಮಾಡಿಕೊಂಡ ಆರೋಪದ ಮೇಲೆ ಪಾಕಿಸ್ತಾನದ ಭಯೋತ್ಪಾದನ ನಿಗ್ರಹ ದಳ ಹಫೀಜ್​ ಸಯೀದ್ ಹಾಗೂ ಆತನ 12 ಸಹಚರರ ವಿರುದ್ಧ 23 ಪ್ರಕರಣಗಳನ್ನು ದಾಖಲಿಸಿದೆ. ಈಗಾಗಲೇ ನಿಷೇಧಕ್ಕೊಳಗಾಗಿರುವ ಜಮಾತ್​ ಉದ್​ ದವಾ ಹಾಗೂ ಫಲಾಹ್​ ಇ ಇನ್ಸಾನಿಯತ್​ ಫೌಂಡೇಶನ್​ ವಿರುದ್ಧವೂ ಕ್ರಮ ಕೈಗೊಳ್ಳುತ್ತಿರುವುದಾಗಿ ಪಂಜಾಬ್ ಪೊಲೀಸರು​ ತಿಳಿಸಿದ್ದಾರೆ.
ಉಗ್ರರಿಗೆ ಹಣಕಾಸು ನೆರವು ನೀಡಿದ ಆರೋಪದ ಮೇಲೆ ಹಫೀಜ್ ಸಯೀದ್ ಹಾಗೂ ಇತರರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದ್ದು, ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸುವುದಾಗಿ ಪಂಜಾಬ್ ಪೊಲೀಸ್ ವಕ್ತಾರ ನಿಯಬ್ ಹೈದರ್ ನಖ್ವಿ ಅವರು ಹೇಳಿದ್ದಾರೆ.
ಪಾಕಿಸ್ತಾನದಲ್ಲಿನ ಈ ಬೆಳವಣಿಗೆ ಕುರಿತು ಪ್ರತಿಕ್ರಿಯಿಸಿದ ವಿದೇಶಾಂಗ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಅವರು, ಇಂತಹ ಮೇಕಪ್(ಕಾಸ್ಮೆಟಿಕ್) ತಂತ್ರಗಳ ಮೂಲಕ ನಮ್ಮನ್ನು ಮುರ್ಖರನ್ನಾಗಿ ಮಾಡಬೇಡಿ ಎಂದಿದ್ದಾರೆ.
ನಿಜವಾಗಲೂ ಉಗ್ರರ ಮತ್ತು ಉಗ್ರ ಸಂಘಟನೆಗಳ ವಿರುದ್ಧ ಕ್ರಮ ತೆಗೆದುಕೊಳ್ಳುವುದಾದರೆ ಮೊದಲು ನಿಮ್ಮ ನೆಲದಲ್ಲಿ ಕಾರ್ಯನಿರ್ವಹಿಸುತ್ತಿರುವ ಭಯೋತ್ಪಾದಕ ಸಂಘಟನೆಗಳನ್ನು ನಾಶಪಡಿಸಿ ಮತ್ತು ವಿಶ್ವಾಸಾರ್ಹ, ಬದಲಾವಣೆ ತರುವಂತಹ ಕ್ರಮಗಳನ್ನು ತೆಗೆದುಕೊಳ್ಳಿ ಎಂದು ರವೀಶ್ ಕುಮಾರ್ ಸಲಹೆ ನೀಡಿದ್ದಾರೆ.
ಮೂಲಗಳ ಪ್ರಕಾರ, ಸದ್ಯ ಹಫೀದ್ ಸಯೀದ್ ಲಾಹೋರ್ ನ ಜೌಹರ್ ಟೌನ್ ನ ತಮ್ಮ ನಿವಾಸದಲ್ಲಿದ್ದು, ಮನೆಯ ಹೊರಗಿರುವ ಪೊಲೀಸರು ಉಗ್ರ ಬಂಧನಕ್ಕಾಗಿ ಇಮ್ರಾನ್ ಖಾನ್ ಸರ್ಕಾರದಿಂದ ಗ್ರೀನ್ ಸಿಗ್ನಲ್ ಗಾಗಿ ಕಾಯುತ್ತಿದ್ದಾರೆ.
SCROLL FOR NEXT