ದೇಶ

ಮೇಘಾಲಯ: ಶಾಸಕ ನಿರ್ಲಕ್ಷಿಸಿದ ಮರದ ಸೇತುವೆಯಿಂದ ಕೆಳಗೆ ಬಿದ್ದ ಮಗಳ ಕಾರು!

Lingaraj Badiger
ಗುವಾಹತಿ: ಅಭಿವೃದ್ಧಿ ಕಾರ್ಯಗಳನ್ನು ನಿರ್ಲಕ್ಷಿಸಿದರೆ ಏನಾಗುತ್ತದೆ ಎಂಬುದರ ಬಗ್ಗೆ ಮೇಘಾಲಯ ಶಾಸಕ ಸ್ಯಾಮ್ಯುಯೆಲ್ ಸಂಗ್ಮಾ ಅವರಿಗೆ ಮಗಳ ಕಾರು ಅಪಘಾತ ಕಠಿಣ ಎಚ್ಚರಿಕೆ ನೀಡಿದೆ.
ಯುಡಿಪಿ ಸಂಗ್ಮಾ ಅವರ ಪುತ್ರಿ ಅಪ್ರಯ ಮರಾಕ್ ಅವರ ಎಸ್ ಯುವಿ ಕಾರು ಹಲವು ವರ್ಷಗಳಿಂದ ನಿರ್ಲಕ್ಷಕ್ಕೆ ಒಳಗಾಗಿದ್ದ ಮರದ ಸೇತುವೆಯಿಂದ ಕೆಳಗೆ ಬಿದ್ದಿದ್ದು, ಅದೃಷ್ಟವಶಾತ್ ಶಾಸಕರ ಪುತ್ರಿ ಹಾಗೂ ಕಾರಿನಲ್ಲಿದ್ದ ಆಕೆಯ ಸ್ನೇಹಿತೆ ಪ್ರಾಣಾಪಯದಿಂದ ಪಾರಾಗಿದ್ದಾರೆ.
ಶಾಸಕರ ಪುತ್ರಿ ಪ್ರಯಾಣಿಸುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಕೆಳಗೆ ಬಿದ್ದಿದೆ ಎನ್ನಲಾಗಿದೆ.
ದಕ್ಷಿಣ ಗರೋ ಹಿಲ್ಸ್ ನಲ್ಲಿರುವ ಮರದ ಸೇತುವೆಯಲ್ಲಿ ಈ ಘಟನೆ ನಡೆದಿದ್ದು, ಶಿಥಿಲಗೊಂಡ ಸೇತುವೆಯನ್ನು ದುರಸ್ಥಿ ಮಾಡಿ, ಇಲ್ಲವೆ ಹೊಸದಾಗಿ ಕಾಂಕ್ರೆಟ್ ಸೇತುವೆ ನಿರ್ಮಾಣ ಮಾಡಿ ಎಂದು ಆ ಭಾಗದ ಜನ ಹಲವು ವರ್ಷಗಳಿಂದ ಒತ್ತಾಯಿಸುತ್ತಿದ್ದಾರೆ. ಆದರೆ ಶಾಸಕ ಸಂಗ್ಮಾ ಅವರು ಮಾತ್ರ ಈ ಸೇತುವೆಗೆ ದಿವ್ಯ ನಿರ್ಲಕ್ಷ್ಯ ವಹಿಸಿದ್ದರು. ಅಲ್ಲದೆ ನಿರ್ಲಕ್ಷವನ್ನು ಪ್ರಶ್ನಿಸಿದ ಸ್ಥಳೀಯ ವ್ಯಕ್ತಿಯ ಮೇಲೆ ಶಾಸಕರು ಹಲ್ಲೆ ಮಾಡಿದ ಘಟನೆಯೂ ನಡೆದಿತ್ತು. ಇದೀಗ ಮಗಳ ಅಪಘಾತ ಅವರಿಗೆ ದೊಡ್ಡ ಪಾಠ ಕಲಿಸಿದೆ.
ಅಪಘಾತದ ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಶಾಸಕ ಸಂಗ್ಮಾ ಅವರು, ಮರದ ಸೇತುವೆ ತೆರವುಗೊಳಿಸಿ ಕಾಂಕ್ರೆಟ್ ಸೇತುವೆ ನಿರ್ಮಿಸುವಂತೆ ನಾನು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇನೆ. ಈಗ ಮತ್ತೆ ಸರ್ಕಾರದ ಮೇಲೆ ಒತ್ತಡ ಹಾಕುವುದಾಗಿ ತಿಳಿಸಿದ್ದಾರೆ.
SCROLL FOR NEXT