ಬಾಬರಿ ಮಸೀದಿ ಧ್ವಂಸ ಪ್ರಕರಣ: ವಿಚಾರಣೆ ಮುಕ್ತಾಯಕ್ಕೆ 6 ತಿಂಗಳ ಕಾಲಾವಕಾಶ ಕೊಡಿ-ವಿಶೇಷ ನ್ಯಾಯಾಧೀಶರಿಂದ ಸುಪ್ರೀಂಗೆ ಮೊರೆ
ನವದೆಹಲಿ: ಬಿಜೆಪಿ ಹಿರಿಯ ಮುಖಂಡ ಎಲ್.ಕೆ.ಅಡ್ವಾಣಿ, ಎಂ.ಎಂ.ಜೋಶಿ ಮತ್ತಿತರರನ್ನು ಒಳಗೊಂಡ ಬಾಬರಿ ಮಸೀದಿ ಧ್ವಂಸ ಪ್ರಕರಣದಲ್ಲಿ ವಿಚಾರಣೆ ನಡೆಸುತ್ತಿರುವ ವಿಶೇಷ ನ್ಯಾಯಾಧೀಶರು ಈ ಪ್ರಕರಣದ ವಿಚಾರಣೆಯನ್ನು ಮುಕ್ತಾಯಗೊಳಿಸಲು ತಮಗೆ ಇನ್ನೂ ಆರು ತಿಂಗಳು ಕಾಲಾವಕಾಶ ಬೇಕೆಂದು ಕೋರಿ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ.
ವಿಶೇಷ ನ್ಯಾಯಾಧೀಶರು, ಮೇ ತಿಂಗಳಲ್ಲಿ ಬರೆದ ಪತ್ರದಲ್ಲಿ, ಅವರು ಸೆಪ್ಟೆಂಬರ್ 30, 2019 ರಂದು ನಿವೃತ್ತರಾಗುವುದಾಗಿ ಹೇಳಿದ್ದಾರೆ. ನ್ಯಾಯಮೂರ್ತಿ ಆರ್.ಎಫ್.ನಾರಿಮನ್ ನೇತೃತ್ವದ ನ್ಯಾಯಪೀಠದ ಮುಂದೆ ಸೋಮವಾರ ಈ ವಿಷಯ ವಿಚಾರಣೆಗೆ ಬಂದಿದ್ದು, ಜುಲೈ 19 ರೊಳಗೆ ಉತ್ತರ ಪ್ರದೇಶ ಸರ್ಕಾರ ಇದಕ್ಕೆ ಪ್ರತಿಕ್ರಿಯೆ ನೀಡುವಂತೆ ಕೋರ್ಟ್ ಕೇಳಿದೆ. ಮಹತ್ವದ ಪ್ರಕರಣಗಳಲ್ಲಿ ವಿಶೇಷ ನ್ಯಾಯಾಧೀಶರ ಅಧಿಕಾರಾವಧಿಯನ್ನು ಅವರು ತೀರ್ಪು ನೀಡುವವರೆಗೂ ವಿಸ್ತರಿಸಲು ಅವಕಾಶವಿದೆ.
ರಾಜಕೀಯವಾಗಿ ಸೂಕ್ಷ್ಮವಾಗಿರುವ 1992 ರ ಬಾಬರಿ ಮಸೀದಿ ಧ್ವಂಸ ಪ್ರಕರಣದ ವಿಚಾರಣೆಯನ್ನು ಎರಡು ವರ್ಷಗಳಲ್ಲಿ ಮುಕ್ತಾಯಗೊಳಿಸಲು 2017 ರ ಏಪ್ರಿಲ್ 19 ರಂದು ಉನ್ನತ ನ್ಯಾಯಾಲಯ ಆದೇಶಿಸಿತ್ತು.