ದೇಶ

ಉತ್ತರ ಪ್ರದೇಶ: ಪ್ರತ್ಯೇಕ ಶೂಟೌಟ್ ಪ್ರಕರಣಗಳಲ್ಲಿ ಎಸ್ ಪಿ ,ವಿಹೆಚ್ ಪಿ ಮುಖಂಡನ ಹತ್ಯೆ

Nagaraja AB
ಲಖನೌ: ಉತ್ತರ ಪ್ರದೇಶದ  ಅಯೋಧ್ಯೆ ಹಾಗೂ ಪ್ರತಪ್ ಗಡದಲ್ಲಿ  ನಡೆದಿರುವ ಪ್ರತ್ಯೇಕ ಶೂಟೌಟ್ ಪ್ರಕರಣಗಳಲ್ಲಿ ಕ್ರಮವಾಗಿ ಸಮಾಜವಾದಿ ಹಾಗೂ ವಿಶ್ವ ಹಿಂದೂ ಪರಿಷತ್ ಮುಖಂಡನ ಹತ್ಯೆಯಾಗಿದ್ದು, ಯೋಗಿ ಆದಿತ್ಯನಾಥ್  ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದು ಬಿದ್ದಿರುವ ಲಕ್ಷಣಗಳು ಗೋಚರಿಸುತ್ತಿವೆ.
ಪ್ರತಾಪ್ ಗಡದಲ್ಲಿ ಬೈಕ್ ನಲ್ಲಿ ಬಂದ ಅಪರಿಚಿತ ದುಷ್ಕರ್ಮಿಗಳು ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಹಾಗೂ ವಕೀಲ ಪ್ರಣವ್ ಮಿಶ್ರಾ ಅವರನ್ನು ಗುಂಡಿಟ್ಟು ಹತ್ಯೆ ಮಾಡಿದ್ದಾರೆ. ಮತ್ತೊಂದೆಡೆ  ಅಯೋಧ್ಯೆ ಕನಕಪುರ್ ಗ್ರಾಮದಲ್ಲಿ ಬೈಕ್ ನಲ್ಲಿ ಬಂದಿರುವ ಅಪರಿಚಿತ ದುಷ್ಕರ್ಮಿಗಳು ಎಸ್ಪಿ ಮುಖಂಡ ಅಖಿಲೇಶ್ ಯಾದವ್ ಎಂಬಾತನ ಮೇಲೆ ಹಲವು ಸುತ್ತಿನ ಗುಂಡಿನ ದಾಳಿ ನಡೆಸಿದ್ದಾರೆ. 
ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಇಂತಹ ಘಟನೆಗಳು ನಡೆದಿಲ್ಲ. ಇಂತಹ ಘಟನೆಗಳು ಆಗಾಗ್ಗೆ ಮರುಕಳಿಸುತ್ತಲೇ ಇದ್ದು, ಉತ್ತರ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ತೀವ್ರ ಹದಗೆಟ್ಟಿದೆ.
ಜಿಲ್ಲಾ ನ್ಯಾಯಾಲಯದಲ್ಲಿ ಕೆಲಸ ಮಾಡುತ್ತಿದ್ದ ವಕೀಲ ಪ್ರಣವ್ ಮಿಶ್ರಾ, ಕೆಲಸಕ್ಕೆ ಬರುವಾಗ ಅವರನ್ನು ಅಡ್ಡಗಟ್ಟಿದ್ದ ಕೆಲ ಶಸ್ತ್ರ ಸಜ್ಜಿತ  ದುಷ್ಕರ್ಮಿಗಳು ಹತ್ಯೆ ಮಾಡಿದ್ದಾರೆ. ಸುಮಾರು ಏಳಕ್ಕೂ ಹೆಚ್ಚು ವಕೀಲರ ಹತ್ಯೆಯಾಗಿದ್ದರೂ ಪೊಲೀಸರು ಮೌನ ವಹಿಸಿದ್ದಾರೆ.ಹತ್ಯೆಗಳ ಬಗ್ಗೆ ಸರಿಯಾಗಿ ತನಿಖೆ ನಡೆಯುತ್ತಿಲ್ಲ. ಆರೋಪಿಗಳನ್ನು ಶೀಘ್ರ ಬಂಧಿಸಬೇಕು, ಮೃತನ ಕುಟುಂಬಕ್ಕೆ ಭದ್ರತೆಯೊಂದಿಗೆ  50 ಲಕ್ಷ ಪರಿಹಾರ ನೀಡಬೇಕು ಎಂದು ಮಿಶ್ರಾ ಸ್ನೇಹಿತ ಅರೀಪ್ ಖಾನ್ ಒತ್ತಾಯಿಸಿದ್ದಾರೆ.
ಜಿಮ್ ನಿಂದ ವಾಪಾಸ್ ಆಗುತ್ತಿದ್ದಾಗ ಅಖಿಲೇಶ್ ಯಾದವ್ ಹತ್ಯೆಯಾಗಿದೆ. ಆತನನ್ನು ಆಸ್ಪತ್ರೆಗೆ ರವಾನಿಸಲಾಯಿತಾದರೂ ತೀವ್ರ ಗಾಯದಿಂದಾಗಿ ಮೃತಪಟ್ಟಿದ್ದಾನೆ. ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ. ಸೂಕ್ತ ತನಿಖೆ ನಡೆಸಲಾಗುವುದು ಎಂದು ಅಯೋಧ್ಯ ಪೊಲೀಸ್ ವರಿಷ್ಠಾಧಿಕಾರಿ ವಿಜಯ್ ಪಾಲ್ ಸಿಂಗ್ ಹೇಳಿದ್ದಾರೆ.
ಈ ಮಧ್ಯೆ ಘಟನೆಯನ್ನು ಖಂಡಿಸಿರುವ ಸಮಾಜವಾದಿ ಮುಖಂಡರು , ಸೈದಾಂತಿಕ ರಾಜಕೀಯದ ಕಾರಣದಿಂದಾಗಿ ನಮ್ಮ ಪಕ್ಷದ ಕಾರ್ಯಕರ್ತರನ್ನು ಹತ್ಯೆಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಉತ್ತರ ಪ್ರದೇಶ ಜಂಗಲ್ ರಾಜ್ಯವಾಗಿದೆ ಎಂದು ಮತ್ತೊಬ್ಬ ಮುಖಂಡರು ಟೀಕಿಸಿದ್ದಾರೆ.
SCROLL FOR NEXT