ದೇಶ

ಮುಂಬೈ ಕಟ್ಟಡ ಕುಸಿತ: ಸಾವಿನ ಸಂಖ್ಯೆ 12ಕ್ಕೆ ಏರಿಕೆ, ತನಿಖೆಗೆ ಸಿಎಂ ಫಡ್ನವಿಸ್ ಆದೇಶ

Lingaraj Badiger
ಮುಂಬೈ: ದಕ್ಷಿಣ ಮುಂಬೈನ ಡೊಂಗ್ರಿ ಪ್ರದೇಶದಲ್ಲಿನ ನಾಲ್ಕು ಅಂತಸ್ತಿನ ಕಟ್ಟಡ ಕುಸಿದು ಬಿದ್ದ ಘಟನೆಯಲ್ಲಿ ಮೃತಪಟ್ಟವರ ಸಂಖ್ಯೆ ಇದೀಗ 12ಕ್ಕೆ ಏರಿಕೆಯಾಗಿದ್ದು, ಅವಶೇಷಗಳಡಿಯಲ್ಲಿ ಇನ್ನೂ ಅನೇಕ ಮಂದಿ ಸಿಲುಕಿರುವುದರಿಂದ ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚುವ ಭೀತಿ ಉಂಟಾಗಿದೆ.
ಅಗ್ನಿಶಾಮಕ ದಳ ಹಾಗೂ ಎನ್‌ಡಿಆರ್‌ಎಫ್‌ ತಂಡಗಳು ಘಟನಾ ಸ್ಥಳಕ್ಕೆ ಧಾವಿಸಿದ್ದು, ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ. ಇದುವರೆಗೆ ನಡೆದ ರಕ್ಷಣಾ ಕಾರ್ಯಾಚರಣೆಯಲ್ಲಿ ಎರಡು ವರ್ಷದ ಮಗು ಸೇರಿದಂತೆ ಐವರನ್ನು ರಕ್ಷಿಸಲಾಗಿದೆ. 40 ರಿಂದ 50 ಮಂದಿ ಅವಶೇಷಗಳಡಿಯಲ್ಲಿ ಸಿಲುಕಿಕೊಂಡಿರಬಹುದು ಎಂದು ಶಂಕೆ ವ್ಯಕ್ತಪಡಿಸಲಾಗಿದೆ.
ಎಎನ್ಐ ಸುದ್ದಿ ಸಂಸ್ಥೆಗೆ ಮಾಹಿತಿ ನೀಡಿದ ಬೃಹನ್ ಮುಂಬೈ ಮಹಾನಗರ ಪಾಲಿಕೆ ವಿಪತ್ತು ನಿರ್ವಹಣಾ ಘಟಕದ ಮುಖ್ಯಸ್ಥ, ಡೊಂಗ್ರಿ ಪ್ರದೇಶದ ಟಂಡೆಲ್ ಸ್ಟ್ರೀಟ್ ನಲ್ಲಿರುವ ಕೇಸರ್ಬಾಯಿ ಕಟ್ಟಡ ಇಂದು ಬೆಳಗ್ಗೆ 11.40ರ ಸುಮಾರಿಗೆ ಕುಸಿದು ಬಿದ್ದಿದೆ ಎಂದು ಹೇಳಿದ್ದಾರೆ.
ಘಟನೆ ಕುರಿತು ತನಿಖೆಗೆ ಆದೇಶಿಸಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನಾವಿಸ್‌ ಅವರು, 
ಸುಮಾರು ನೂರು ವರ್ಷಗಳ ಹಳೆಯ ಕಟ್ಟಡ ಇದಾಗಿದ್ದು, 2012ರಲ್ಲೇ ಕಟ್ಟಡ ತೆರವು ಗೊಳಿಸಲು ಆದೇಶ ನೀಡಲಾಗಿತ್ತು. ಅಲ್ಲದೆ ಅಕ್ರಮವಾಗಿ ಕಟ್ಟಡ ನಿರ್ಮಿಸಲಾಗಿದೆ ಎಂದು ತಿಳಿದು ಬಂದಿದೆ. ಈ ಸಂಬಂಧ ಸಂಪೂರ್ಣ ತನಿಖೆ ನಡೆಸಲಾಗುವುದು. 15 ಕುಟುಂಬ ಅವಶೇಷಗಳಡಿಯಲ್ಲಿ ಸಿಲುಕಿಕೊಂಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ ಎಂದು ಹೇಳಿದ್ದಾರೆ.
SCROLL FOR NEXT