ದೇಶ

ತಿರುಪತಿಯಲ್ಲಿ ವಿಐಪಿ ಸರತಿ ರದ್ದು; ಟಿಟಿಡಿ

Srinivas Rao BV
ತಿರುಮಲ: ಪ್ರಮುಖ ಬೆಳವಣಿಗೆಯೊಂದರಲ್ಲಿ, ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ) ದೇಗುಲದ ದರ್ಶನದ ಸಾಲಿನಲ್ಲಿ ವಿಐಪಿ ಮಾರ್ಗದ ವರ್ಗೀಕರಣವನ್ನು ತಕ್ಷಣದಿಂದ ಜಾರಿಗೆ ಬರುವಂತೆ ರದ್ದುಗೊಳಿಸಿದೆ ಎಂದು ಟ್ರಸ್ಟ್ ಅಧ್ಯಕ್ಷ ವೈ.ವಿ.ಸುಬ್ಬಾರೆಡ್ಡಿ ತಿಳಿಸಿದ್ದಾರೆ. 
ತಿರುಮಲದ ಕಾರ್ಯನಿರ್ವಾಹಕ ಅಧಿಕಾರಿ ಅನಿಲ್ ಸಿಂಗ್ ಹಾಗೂ ವಿಶೇಷಾಧಿಕಾರಿ ಎ.ವಿ. ಧರ್ಮರೆಡ್ಡಿ ಅವರೊಂದಿಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ವೈ.ಎಸ್.ಜಗನ್ ಮೋಹನ್ ರೆಡ್ಡಿ ಅವರ ನಿರ್ದೇಶನದ ಮೇರೆಗೆ ಈ ಹೊಸ ನಿಯಮ ಜಾರಿಗೆ ತರಲಾಗುತ್ತಿದೆ ಎಂದರು. 
ದೇಗುಲದಲ್ಲಿ ಸಾಮಾನ್ಯ ಯಾತ್ರಿಕರಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಅವರಿಗೆ ನೂಕಾಟ, ತಳ್ಳಾಟ ಮುಕ್ತ ದರ್ಶನಕ್ಕೆ ಅವಕಾಶ ನೀಡಬೇಕು ಹಾಗೂ ದರ್ಶನಕ್ಕೆ ಹೆಚ್ಚಿನ ಸಮಯ ಒದಗಿಸಬೇಕು ಎಂದು ಜಗನ್ ಮೋಹರ್ ರೆಡ್ಡಿ ಅವರು ನಿರ್ದೇಶನ ನೀಡಿದ ಹಿನ್ನೆಲೆಯಲ್ಲಿ ವಿಐಪಿ ಸರತಿಗಳಾದ ಎಲ್ 1, ಎಲ್ 2 ಹಾಗೂ ಎಲ್ 3 ಗಳನ್ನು ರದ್ದುಗೊಳಿಸಲಾಗುವುದು ಎಂದರು.
ಇದಕ್ಕಾಗಿ ಪ್ರತ್ಯೇಕ ಸಾಫ್ಟ್ ವೇರ್ ತಯಾರಿಸಲು ಸಮಯ ಬೇಕಿರುವುದರಿಂದ ಒಂದೆರಡು ದಿನಗಳಲ್ಲಿ ಈ ಹೊಸ ನಿಯಮ ಜಾರಿಗೆ ಬರಲಿದೆ ಎಂದರು.
ಆದರೆ, ಈ ಬದಲಾವಣೆಯಿಂದ ವಿಐಪಿ ಶಿಷ್ಟಾಚಾರದಲ್ಲಿ ಯಾವುದೇ ವ್ಯತ್ಯಾಸವಾಗುವುದಿಲ್ಲ. ಈ ಮೊದಲು ವಿಐಪಿಗಳ ದರ್ಶನಕ್ಕಾಗಿಯೇ 3 ಗಂಟೆಗಳ ಕಾಲಾವಧಿ ಮೀಸಲಿಡಲಾಗುತ್ತಿತ್ತು. ಇನ್ನು ಮುಂದೆ ಆ ಅವಧಿಯನ್ನು ಅರ್ಧಕ್ಕಿಳಿಸಿ, ಹಂತಹಂತವಾಗಿ ಅವಕಾಶ ಕಲ್ಪಿಸಲಾಗುವುದು ಎಂದರು. 
ತಾಡೇಪಲ್ಲಿಯಲ್ಲಿ ಟಿಟಿಡಿ ಅಧ್ಯಕ್ಷರ ಕೊಠಡಿ ವಿವಾದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು,  ಹೈದರಾಬಾದ್, ವಿಜಯವಾಡ, ಚೆನ್ನೈ, ಬೆಂಗಳೂರು, ನವದೆಹಲಿ, ಮುಂಬೈ ಸೇರಿದಂತೆ ಎಲ್ಲಾ ಪ್ರಮುಖ ನಗರಗಳಲ್ಲಿ ದೇಗುಲ ಮಾಹಿತಿ ಕೇಂದ್ರಗಳಿವೆ. ಆದ್ದರಿಂದ, ರಾಜ್ಯದ ರಾಜಧಾನಿಯಲ್ಲಿ ಕಚೇರಿಯನ್ನು ಸ್ಥಾಪಿಸುವುದರಲ್ಲಿ ತಪ್ಪೇನಿದೆ ಎಂದರು.
SCROLL FOR NEXT