ದೇಶ

ಶ್ರೀಲಂಕಾದಲ್ಲಿ ಸೀತೆಯ ಅಪಹರಣವಾಗಿತ್ತೋ ಇಲ್ಲವೋ ಎಂದು ಸರ್ಕಾರ ಏಕೆ ಪರೀಕ್ಷೆ ಮಾಡುವುದು?:ಶಿವರಾಜ್ ಸಿಂಗ್ ಚೌಹಾಣ್

Sumana Upadhyaya
ಭೋಪಾಲ್: ಶ್ರೀಲಂಕಾದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಸೀತಾ ದೇವಿಯ ದೇವಸ್ಥಾನ ವಿಚಾರದಲ್ಲಿ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಮತ್ತು ಕಾಂಗ್ರೆಸ್ ಸರ್ಕಾರದ ನಡುವೆ ವಾಗ್ಯುದ್ಧ ನಡೆದಿದೆ.
ಜನರ ಭಾವನೆಗಳಿಗೆ ಕಮಲ್ ನಾಥ್ ನೇತೃತ್ವದ ಸರ್ಕಾರ ಧಕ್ಕೆಯನ್ನುಂಟುಮಾಡುತ್ತಿದೆ ಎಂದು ಆರೋಪಿಸಿದ ಚೌಹಾಣ್, ಕಾಂಗ್ರೆಸ್ ಸರ್ಕಾರ ದೇವಸ್ಥಾನ ನಿರ್ಮಾಣವನ್ನು ಪೂರ್ಣಗೊಳಿಸದೆ ಸೀತಾ ಮಾತೆ ಅಪಹರಿಸಲ್ಪಟ್ಟಿದ್ದರೇ ಇಲ್ಲವೇ ಎಂದು ಪರಿಶೀಲನೆ ಮಾಡಲು ಹೊರಟಿದೆ ಎಂದರು.
ಸೀತಾ ಮಾತೆ ಅಪಹರಿಸಲ್ಪಟ್ಟಿದ್ದರೇ ಇಲ್ಲವೇ ಎಂದು ಕಮಲ್ ನಾಥ್ ಸರ್ಕಾರದ ಅಧಿಕಾರಿಗಳು ಶ್ರೀಲಂಕಾದಲ್ಲಿ ಸಮೀಕ್ಷೆ ಮಾಡಲು ಹೊರಟಿದ್ದಾರೆ. ಎಷ್ಟು ಹಾಸ್ಯಾಸ್ಪದವಿದು. ಇಡೀ ಜಗತ್ತಿಗೆ ಗೊತ್ತಿರುವ ವಿಷಯವನ್ನು ಪರೀಕ್ಷೆ ಮಾಡಲು ಹೊರಟು ಕಮಲ್ ನಾಥ್ ನೇತೃತ್ವದ ಸರ್ಕಾರ ಜನರ ಭಾವನೆಗಳಿಗೆ ಧಕ್ಕೆಯನ್ನುಂಟುಮಾಡಿದೆ ಎಂದು ಆರೋಪಿಸಿದ್ದಾರೆ.
2010ರಲ್ಲಿ ಶಿವರಾಜ್ ಸಿಂಗ್ ನೇತೃತ್ವದ ಸರ್ಕಾರವಿದ್ದಾಗ ರಾವಣ ಸೀತೆಯನ್ನು ಅಪಹರಿಸಿ ಶ್ರೀಲಂಕಾಕ್ಕೆ ಕೊಂಡೊಯ್ದು ಒತ್ತೆಯಾಳಾಗಿಟ್ಟ ಸ್ಥಳದಲ್ಲಿ ಸೀತಾಮಾತೆಯ ಮಂದಿರವನ್ನು ನಿರ್ಮಿಸುವುದಾಗಿ ಘೋಷಿಸಿದ್ದರು. ಅದಕ್ಕಾಗಿ 1 ಕೋಟಿ ರೂಪಾಯಿಯನ್ನು ಸಹ ಅನುಮೋದನೆ ಮಾಡಿದ್ದರು. ಆದರೆ ಕಳೆದ 9 ವರ್ಷಗಳಲ್ಲಿ ಆ ಕೆಲಸ ಮುಂದುವರಿಯಲಿಲ್ಲ.
ಶ್ರೀಲಂಕಾದ ಅಶೋಕವನದಲ್ಲಿ ರಾವಣನು ಸೀತಾಮಾತೆಯನ್ನು ಆಡಗಿಸಿಟ್ಟಿದ್ದ ಎಂದು ರಾಮಾಯಣದ ಮೂಲಕ ಇಡೀ ಜಗತ್ತಿಗೆ ಗೊತ್ತಿದೆ. ನಂತರ ರಾಮನನ್ನು ಸೇರಬೇಕಾದರೆ ಸೀತಾಮಾತೆ ತನ್ನ ಪಾವಿತ್ರ್ಯತೆಯನ್ನು ಸಾಬೀತುಪಡಿಸಲು ಅಗ್ನಿ ಪರೀಕ್ಷೆ ಎದುರಿಸಬೇಕಾಯಿತು. ನಾನು ಶ್ರೀಲಂಕಾಕ್ಕೆ ಹೋಗಿದ್ದಾಗ ಆ ಸ್ಥಳದಲ್ಲೊಂದು ಭವ್ಯ ಮಂದಿರ ನಿರ್ಮಾಣಗೊಳ್ಳಬೇಕೆಂದು ಭಾವಿಸಿದ್ದೆ. ಇದೀಗ ಕಮಲ್ ನಾಥ್ ಸರ್ಕಾರ ಆ ವಿಷಯದ ಬಗ್ಗೆ ಸತ್ಯಾಸತ್ಯತೆಯನ್ನು ಪರೀಕ್ಷಿಸಲು ಹೊರಟಿರುವುದು ಆಘಾತವನ್ನುಂಟುಮಾಡಿದೆ ಎಂದರು.
ಶಿವರಾಜ್ ಸಿಂಗ್ ಚೌಹಾಣ್ ಆರೋಪಕ್ಕೆ ಪ್ರತಿಕ್ರಿಯಿಸಿರುವ ಸಾರ್ವಜನಿಕ ಸಂಪರ್ಕ ಸಚಿವ ಪಿಸಿ ಶರ್ಮ, ರಾಜಕೀಯ ಲಾಭ ಪಡೆದುಕೊಳ್ಳಲು ಶಿವರಾಜ್ ಸಿಂಗ್ ಚೌಹಾಣ್ ಶ್ರೀಲಂಕಾಕ್ಕೆ ಭೇಟಿ ನೀಡಿದ್ದರು ಎಂದರು. 
ದೇವಸ್ಥಾನ ನಿರ್ಮಿಸಲು ಹಿಂದಿನ ಸರ್ಕಾರ ಮಾಡಿರುವ ಪ್ರಯತ್ನದ ಬಗ್ಗೆ ನಮಗೆ ಒಂದು ದಾಖಲೆ ಕೂಡ ಸಿಕ್ಕಿಲ್ಲ ಎಂದಿದ್ದಾರೆ.
SCROLL FOR NEXT