ದೇಶ

ಏ.2023ರ ವೇಳೆಗೆ ರಷ್ಯಾದಿಂದ ಭಾರತಕ್ಕೆ ಎಸ್ -400 ವಾಯು ರಕ್ಷಣಾ ಕ್ಷಿಪಣಿ ಖರೀದಿ

Sumana Upadhyaya
ನವದೆಹಲಿ: ಏಪ್ರಿಲ್ 2023ರ ವೇಳೆಗೆ ಭಾರತ ರಷ್ಯಾದಿಂದ ಎಸ್-400 ವಾಯು ರಕ್ಷಣಾ ಕ್ಷಿಪಣಿಯನ್ನು ಖರೀದಿಸಲಿದೆ.
ಈ ಕುರಿತು ಕಳೆದ ವರ್ಷ ಅಕ್ಟೋಬರ್ 5ರಂದು ರಷ್ಯಾದೊಂದಿಗೆ ಭಾರತ ಸಹಿ ಮಾಡಿಕೊಂಡಿದ್ದು 2023ನೇ ಇಸವಿ ಏಪ್ರಿಲ್ ವೇಳೆಗೆ ಭಾರತಕ್ಕೆ ಪೂರೈಕೆಯಾಗಲಿದೆ ಎಂದು ರಕ್ಷಣಾ ಇಲಾಖೆಯ ರಾಜ್ಯ ಸಚಿವ ಶ್ರೀಪಾದ್ ನಾಯಕ್ ತಿಳಿಸಿದರು.
ಅವರು ನಿನ್ನೆ ಲೋಕಸಭೆಯಲ್ಲಿ ಕಲಾಪದ ವೇಳೆ ಔರಂಗಾಬಾದ್ ಸಂಸದ ಇಮ್ತಿಯಾಜ್ ಜಲೀಲ್ ಸೈಯದ್ ಅವರ ಪ್ರಶ್ನೆಗೆ ಉತ್ತರಿಸಿದರು.
ಅಮೆರಿಕಾದ ಟರ್ಮಿನಲ್ ಹೈ ಅಲ್ಟಿಟ್ಯೂಡ್ ರಕ್ಷಣೆಯನ್ನು ಖರೀದಿಸುವಂತೆ ಅಮೆರಿಕಾದ ಕಾಟ್ಸಾ ಕಾಯ್ದೆಯಡಿ ಭಾರತದ ಮೇಲೆ ಅಮೆರಿಕಾ ಒತ್ತಡ ಹಾಕುತ್ತಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು ಬೆದರಿಕೆ ಗ್ರಹಿಕೆ, ಕಾರ್ಯನಿರ್ವಹಣೆ ಮತ್ತು ತಾಂತ್ರಿಕ ವಿಷಯಗಳ ಆಧಾರದ ಮೇಲೆ ಸರ್ಕಾರ ಸ್ವಾಯತ್ತ ನಿರ್ಧಾರ ತೆಗೆದುಕೊಂಡಿದ್ದು ರಕ್ಷಣಾ ಸವಾಲುಗಳನ್ನು ಗಮನದಲ್ಲಿಟ್ಟುಕೊಂಡು ರಷ್ಯಾದಿಂದ ಕ್ಷಿಪಣಿ ಖರೀದಿಗೆ ಮುಂದಾಗಿದ್ದೇವೆ ಎಂದರು.
5 ದೂರವ್ಯಾಪ್ತಿಯ ರಕ್ಷಣಾ ಕ್ಷಿಪಣಿಗೆ ಸುಮಾರು 35 ಸಾವಿರ ಕೋಟಿ ರೂಪಾಯಿ ವೆಚ್ಚವಾಗಲಿದೆ. 600 ಕಿಲೋ ಮೀಟರ್ ವರೆಗೆ 300 ಗುರಿಗಳನ್ನು ಕ್ಷಿಪಣಿ ಪತ್ತೆಹಚ್ಚಲಿದ್ದು ವಿವಿಧ ದೂರಗಳಲ್ಲಿ ವಿವಿಧ ರೀತಿಯ ನಾಲ್ಕು ಕ್ಷಿಪಣಿಗಳನ್ನು ಕಾರ್ಯನಿರ್ವಹಣೆ ಮಾಡಲಿದೆ. 
ಕ್ಷಿಪಣಿಯನ್ನು 5 ನಿಮಿಷಗಳಲ್ಲಿ ನಿಯೋಜಿಸಬಹುದಾಗಿದ್ದು ಇತರ ಕ್ಷಿಪಣಿ ರಕ್ಷಣಾ ವ್ಯವಸ್ಥೆಗಿಂತ ವೆಚ್ಚ ಕಡಿಮೆಯಾಗುತ್ತದೆ. 100 ಅಡಿಯಿಂದ 40 ಸಾವಿರ ಅಡಿಗಳವರೆಗೆ ಗಾಳಿಯಲ್ಲಿರುವ ಎಲ್ಲಾ ವಸ್ತುಗಳನ್ನು ಗುರಿಯಾಗಿಟ್ಟುಕೊಂಡು ಹೊಡೆಯಲಿದೆ.
SCROLL FOR NEXT