ದೇಶ

ಕಾಂಚಿಪುರಂ ದೇವಸ್ಥಾನ: ಕ್ಯೂನಲ್ಲಿದ್ದ ಮೂವರು ಭಕ್ತರು ಉಸಿರುಗಟ್ಟಿ ಸಾವು

Lingaraj Badiger
ಚೆನ್ನೈ: ಕಾಂಚಿಪುರಂನ ವರದರಾಜ ಪೇರುಮಾಳ್ ದೇವಸ್ಥಾನದಲ್ಲಿ ದರ್ಶನಕ್ಕಾಗಿ ಕ್ಯೂ ನಿಂತಿದ್ದ ಭಕ್ತರಲ್ಲಿ ಇಬ್ಬರು ಮಹಿಳೆ ಸೇರಿದಂತೆ ಮೂವರು ಭಕ್ತರು ಉಸಿರುಗಟ್ಟಿ ಮೃತಪಟ್ಟಿರುವ ದಾರುಣ ಘಟನೆ ಗುರುವಾರ ಮಧ್ಯಾಹ್ನ ನಡೆದಿದೆ.
ಪ್ರಾಥಮಿಕ ವರದಿಗಳ ಪ್ರಕಾರ, ದೀರ್ಘಕಾಲ ಕ್ಯೂನಲ್ಲಿ ನಿಂತಿದ್ದ ಆರು ಭಕ್ತರು ಅಸ್ವಸ್ಥಗೊಂಡಿದ್ದು, ಕೂಡಲೇ ಅವರನ್ನು ಚೆಂಗಲ್ಪಟ್ಟು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೂವರು ಮೃತಪಟ್ಟಿದ್ದಾರೆ. 
ಮೃತರನ್ನು ಸೇಲಂ ಮೂಲದ ಆನಂದನ್(56), ಆವಡಿ ಮೂಲದ ಜಯಂತಿ(62) ಹಾಗೂ ಆಂಧ್ರ ಪ್ರದೇಶದ ಗುಂಟೂರ್ ಮೂಲದ ನಾರಾಯಣಿ(65) ಎಂದು ಗುರುತಿಸಲಾಗಿದೆ.
ಕಾಂಚಿಪುರಂ ಜಿಲ್ಲಾ ಆಡಳಿತ ಹಾಗೂ ಪೊಲೀಸರು, ಈ ಮೂವರು ಭಕ್ತರು ಉಸಿರುಗಟ್ಟಿ ಮೃತಪಟ್ಟಿಲ್ಲ. ಅವರು ದೀರ್ಘ ಕಾಲಿಕ ಅನಾರೋಗ್ಯ ಹಾಗೂ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಹೇಳಿದ್ದಾರೆ.
40 ವರ್ಷಗಳಿಂದ ನೀರಿನಲ್ಲಿದ್ದ `ಅಥಿ ವರದಾರ್’ ಮೂರ್ತಿಯನ್ನು ಮೇಲಕ್ಕೆ ಎತ್ತಲಾಗಿದ್ದು, ದೇವರನ್ನು ನೋಡಲು ಲಕ್ಷಾಂತರ ಮಂದಿ ಭಕ್ತಾದಿಗಳು ದೇಗುಲದತ್ತ ಬರುತ್ತಿದ್ದಾರೆ. ದಿನಗಳ ಕಾಲ ಮಾತ್ರ ಅಥಿ ವರದಾರ್ ದೇವರ ದರ್ಶನ ಪಡೆಯಬಹುದಾಗಿದೆ. ಹೀಗಾಗಿ ನಿನ್ನೆ ರಾತ್ರಿಯಿಂದಲೇ ಭಕ್ತರು ಆಗಮಿಸುತ್ತಿದ್ದು, ಸುಮಾರು 5 ಕಿ.ಮೀ.ವರೆಗೆ ಕ್ಯೂ ಇತ್ತು. ಆದರೆ ದೇವಸ್ಥಾನ ಮಂಡಳಿ ಯಾವುದೇ ಸೂಕ್ತ ಸೌಲಭ್ಯಗಳನ್ನು ನೀಡಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
SCROLL FOR NEXT