ದೇಶ

ಪೊಲೀಸ್ ಸರ್ಪಗಾವಲಿನ ಹೊರತಾಗಿಯೂ ಸೋನಭದ್ರ ಸಂತ್ರಸ್ಥರ ಭೇಟಿ ಮಾಡಿದ ಪ್ರಿಯಾಂಕಾ

Srinivasamurthy VN
ಲಖನೌ: ಉತ್ತರ ಪ್ರದೇಶ ಪೊಲೀಸರ ಸರ್ಪಗಾವಲಿನ ಹೊರತಾಗಿಯೂ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಸೋನಭದ್ರ ಫೈರಿಂಗ್ ಪ್ರಕರಣದ ಸಂತ್ರಸ್ಥರ ಭೇಟಿ ಮಾಡುವಲ್ಲಿ ಕೊನೆಗೂ ಯಶಸ್ವಿಯಾಗಿದ್ದಾರೆ.
ನಿನ್ನೆ ಭೂಮಿ  ಬಿಟ್ಟುಕೊಡಲು ನಿರಾಕರಿಸಿದ 10 ಆದಿವಾಸಿ ರೈತರ ಮೇಲೆ ಗುಂಡು ಹಾರಿಸಿದ ಪ್ರಕರಣದಲ್ಲಿ ಮೃತಪಟ್ಟವರ ಕುಟುಂಬಸ್ಥರು ಮತ್ತು ಗಾಯಗೊಂಡವರನ್ನು ಭೇಟಿ ಮಾಡಲು ಪ್ರಿಯಾಂಕಾ ಗಾಂಧಿ ಸೋನಭದ್ರಕ್ಕೆ ಆಗಮಿಸಿದ್ದರು. ಆದರೆ ಉತ್ತರ ಪ್ರದೇಶ ಪೊಲೀಸರು ಅವರನ್ನು ತಡೆದಿದ್ದು ಮಾತ್ರವಲ್ಲದೇ ಅವರನ್ನು ವಶಕ್ಕೆ ಪಡೆದಿದ್ದರು. ಇದನ್ನು ವಿರೋಧಿಸಿದ್ದ ಪ್ರಿಯಾಂಕಾ ಮಿರ್ಜಾಪುರದ ಚುನಾರ್ ಗೆಸ್ಟ್ ಹೌಸ್ ನಲ್ಲಿ ಉಳಿದುಕೊಂಡೇ ಪ್ರತಿಭಟನೆ ನಡೆಸಿದ್ದರು. 
ಇದೀಗ ಪೊಲೀಸ್ ಸರ್ಪಗಾವಲಿನ ಹೊರತಾಗಿಯೂ ಫೈರಿಂಗ್ ಪ್ರಕರಣದ ಸಂತ್ರಸ್ಥರನ್ನು ಭೇಟಿ ಮಾಡುವಲ್ಲಿ ಪ್ರಿಯಾಂಕಾ ಯಶಸ್ವಿಯಾಗಿದ್ದಾರೆ. ಈ ಕುರಿತಂತೆ ಮಾತನಾಡಿರುವ ಒಟ್ಟು 15 ಸಂತ್ರಸ್ಥ ಕುಟುಂಬಗಳ ಪೈಕಿ ಮೂರು ಕುಟುಂಬಸ್ಥರನ್ನು ಮಾತ್ರ ಭೇಟಿಯಾಗಲು ಸಾಧ್ಯವಾಗಿದ್ದು, ಪೊಲೀಸರು ಉದ್ದೇಶಪೂರ್ವಕವಾಗಿ ತಮ್ಮನ್ನು ಭೇಟಿಯಾಗಲು ಬಂದ ಸಂತ್ರಸ್ಥ ಕುಟುಂಬಸ್ಥರನ್ನು ತಡೆಯುತ್ತಿದ್ದಾರೆ. ಉತ್ತರ ಪ್ರದೇಶದಲ್ಲಿ ಗುಂಡಾರಾಜ್ ಚಾಲ್ತಿಯಲ್ಲಿದೆ ಎಂದು ಕಿಡಿಕಾರಿದ್ದಾರೆ. ಈ ಕುರಿತಂತೆ ಮಾಧ್ಯಮಗಳು ಬೆಳಕು ಚೆಲ್ಲಿ ಉತ್ತರ ಪ್ರದೇಶದ ಪರಿಸ್ಥಿತಿ ಜನಸಾಮಾನ್ಯರಿಗೆ ತಿಳಿಯುವಂತೆ ಮಾಡಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.
ಇನ್ನು ಅತಿಥಿಗೃಹದಲ್ಲಿ ಹವಾ ನಿಯಂತ್ರಿತ ಕೊಠಡಿಯಿಲ್ಲ ಎಂದು ಹೇಳಿ ವಾರಣಾಸಿಗೆ ಕಳುಹಿಸಲು ಜಿಲ್ಲಾಡಳಿತದ ಹಿರಿಯ ಅಧಿಕಾರಿಗಳನ್ನು ಪ್ರಿಯಾಂಕಾ ಅವರನ್ನು ಭೇಟಿ ಮಾಡಿ ಮನವೊಲಿಸಲು ಪ್ರಯತ್ನಿಸಿ ವಿಫಲರಾದರು. ಗುಂಡಿನ ದಾಳಿಗೆ ಬಲಿಯಾದವರ ಕುಟುಂಬಸ್ಥರನ್ನು ಭೇಟಿ ಮಾಡುವವರೆಗೆ ಸ್ಥಳ ಬಿಟ್ಟು ಹೋಗುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ನಿನ್ನೆ ರಾತ್ರಿ ಪ್ರಿಯಾಂಕಾ ಗಾಂಧಿ ವಾದ್ರಾ ಉಳಿದುಕೊಂಡಿದ್ದ ಅತಿಥಿ ಗೃಹದಲ್ಲಿ ರಾತ್ರಿ 10 ಗಂಟೆ ವೇಳೆಗೆ ವಿದ್ಯುತ್ ನಿಲುಗಡೆಯಾಯಿತು. ನಂತರ ಕಾಂಗ್ರೆಸ್ ಕಾರ್ಯಕರ್ತರೆಲ್ಲಾ ಒಟ್ಟು ಸೇರಿ ಹಣ ಸಂಗ್ರಹಿಸಿ ಬಾಡಿಗೆಗೆ ಜನರೇಟರ್ ತಂದರು. ಇಂದು ಕೂಡ ಧರಣಿ ಮುಂದುವರಿಸಿರುವ ಪ್ರಿಯಾಂಕಾ ಗಾಂಧಿ, ನಾವಿಲ್ಲಿ ಧರಣಿ ಕುಳಿತು 24 ಗಂಟೆಯಾಗಿದೆ. ಸೋನಭದ್ರ ಗುಂಡಿನ ದಾಳಿಗೆ ಬಲಿಯಾದವರ ಕುಟುಂಬಸ್ಥರನ್ನು ಭೇಟಿ ಮಾಡಲು ಅವಕಾಶ ನೀಡುವವರೆಗೆ ನಾನು ಈ ಜಾಗ ಬಿಟ್ಟು ಹೋಗುವುದಿಲ್ಲ ಎಂದಿದ್ದಾರೆ.
SCROLL FOR NEXT