ದೇಶ

ತಾಂತ್ರಿಕ ದೋಷ ನಿವಾರಣೆ, ಚಂದ್ರಯಾನ 2 ಉಡಾವಣೆಗೆ ಸಿದ್ಧ: ಇಸ್ರೋ ಮಾಜಿ ಮುಖ್ಯಸ್ಥ ಕಿರಣ್ ಕುಮಾರ್

Srinivasamurthy VN
ಶ್ರೀಹರಿಕೋಟಾ: ಭಾರತೀಯ ಹೆಮ್ಮೆಯ ಬಾಹ್ಯಾಕಾಶ ಯೋಜನೆ ಚಂದ್ರಯಾನ–2 ಯೋಜನೆಯ ತಾಂತ್ರಿಕ ದೋಷ ನಿವಾರಣೆಯಾಗಿದ್ದು, ನೌಕೆ ಸಂಪೂರ್ಣ ಸಿದ್ಧವಾಗಿದೆ ಎಂದು ಮಾಜಿ ಇಸ್ರೋ ಮುಖ್ಯಸ್ಥ ಕಿರಣ್ ಕುಮಾರ್ ಹೇಳಿದ್ದಾರೆ.
ಈ ಕುರಿತಂತೆ ಸುದ್ದಿಸಂಸ್ಛೆಯೊಂದಿಗೆ ಮಾತನಾಡಿರುವ ಕಿರಣ್ ಕುಮಾರ್ ಅವರು, ಈ ಹಿಂದೆ ಕಾಣಿಸಿಕೊಂಡಿದ್ದ ಎಲ್ಲ ತಾಂತ್ರಿಕದೋಷಗಳನ್ನು ನಿವಾರಣೆ ಮಾಡಿದ್ದಷ್ಟೇ ಅಲ್ಲದೇ ಪ್ರಾಯೋಗಿಕ ಪರೀಕ್ಷೆ ಕೂಡ ನಡೆಸಲಾಗಿದೆ. ಎಲ್ಲ ಪರೀಕ್ಷೆಗಳೂ ಯಶಸ್ವಿಯಾಗಿದ್ದು, ನಾವು ಉಡಾವಣೆಗೆ ಸಿದ್ಧವಾಗಿದ್ದೇವೆ ಎಂದು ಹೇಳಿದ್ದಾರೆ.
ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಇಸ್ರೋ ಕೂಡ ಟ್ವೀಟ್ ಮಾಡಿದ್ದು, ಚಂದ್ರಯಾನ 2 ನೌಕೆಯನ್ನು ಹೊತ್ತು ನಭಕ್ಕೆ ಚಿಮ್ಮಲಿರುವ ರಾಕೆಟ್ ‘ಬಾಹುಬಲಿ’ ಸಮರ್ಥವಾಗಿದೆ.  ಚಂದ್ರಯಾನ–2 ಮಿಷನ್‌ನ ಉಡ್ಡಯನ ರಾಕೇಟ್‌ ನಲ್ಲಿನ ತಾಂತ್ರಿಕ ದೋಷವನ್ನು ಪರೀಕ್ಷಿಸಿ, ಸರಿಪಡಿಸಲಾಗಿದ್ದು, ಅದರ ಕಾರ್ಯಕ್ಷಮತೆ ಸಮರ್ಥವಾಗಿದೆ. ಉಡ್ಡಯನಕ್ಕೆ ಪೂರ್ವ ತಯಾರಿ ಪೂರ್ಣಗೊಂಡಿದೆ ಎಂದು ಟ್ವೀಟ್‌ ಮಾಡಿದೆ.
ಇದೇ 22ರಂದು ಚಂದ್ರಯಾನ–2 ಉಡ್ಡಯನ ಮಾಡಲು ಇಸ್ರೊ ನಿರ್ಧರಿಸಿದೆ. ಅಂದು ಮಧ್ಯಾಹ್ನ 2.43ಕ್ಕೆ ನೌಕೆಯನ್ನು ಹೊತ್ತ ರಾಕೆಟ್ ‘ಬಾಹುಬಲಿ’ ನಭಕ್ಕೆ ಚಿಮ್ಮಲಿದೆ.  
ಈ ಮುನ್ನ ಜುಲೈ 15ರಂದು ನೌಕೆ ಉಡ್ಡಯನಕ್ಕೆ ಯೋಜಿಸಲಾಗಿತ್ತು. ಆದರೆ ಉಡ್ಡಯನಕ್ಕೆ 56 ನಿಮಿಷಗಳು ಬಾಕಿ ಇರುವಾಗ ರಾಕೆಟ್‌ ನಲ್ಲಿ ತಾಂತ್ರಿಕ ದೋಷ ಕಂಡುಬಂದದ್ದರಿಂದ ರದ್ದುಪಡಿಸಲಾಗಿತ್ತು. ಇದಾದ ಮೂರು ದಿನಗಳ ಬಳಿಕ ಹೊಸ ದಿನಾಂಕವನ್ನು ಇಸ್ರೊ ಪ್ರಕಟಿಸಿತ್ತು.
SCROLL FOR NEXT