ದೇಶ

ಕಾಶ್ಮೀರ ವಿಷಯದಲ್ಲಿ ಟ್ರಂಪ್ ಮಧ್ಯಸ್ಥಿಕೆಗೆ ಪ್ರಧಾನಿ ಮೋದಿ ಮನವಿ ಮಾಡಿಲ್ಲ: ರಾಜ್ಯಸಭೆಯಲ್ಲಿ ಜೈಶಂಕರ್ ಹೇಳಿಕೆ

Sumana Upadhyaya
ನವದೆಹಲಿ: ಕಾಶ್ಮೀರ ವಿಷಯದಲ್ಲಿ ಅಮೆರಿಕ ಅಧ‍್ಯಕ್ಷ ಡೋನಾಲ್ಡ್ ಟ್ರಂಪ್ ನೀಡಿರುವ ಹೇಳಿಕೆ ವಿರೋಧಿಸಿ ವಿರೋಧ ಪಕ್ಷಗಳು ರಾಜ್ಯಸಭೆಯಲ್ಲಿ ಮಂಗಳವಾರ ಗದ್ದಲವೆಬ್ಬಿಸಿದ ಪರಿಣಾಮ ಕಲಾಪವನ್ನು ಮಧ್ಯಾಹ್ನಕ್ಕೆ ಮುಂದೂಡಲಾಯಿತು.
ಕಾಶ್ಮೀರ ವಿವಾದ ಬಗೆಹರಿಸುವಲ್ಲಿ ಪಾಕಿಸ್ತಾನ ಜೊತೆ ಮಾತುಕತೆ ನಡೆಸಲು ಮಧ್ಯಸ್ಥಿಕೆ ವಹಿಸುವಂತೆ ಡೊನಾಲ್ಡ್ ಟ್ರಂಪ್ ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಯಾವುದೇ ರೀತಿಯಲ್ಲೂ ಮನವಿ ಮಾಡಿಕೊಂಡಿಲ್ಲ ಎಂದು ರಾಜ್ಯಸಭೆಯಲ್ಲಿ ಇಂದು ವಿದೇಶಾಂಗ ವ್ಯವಹಾರಗಳ ಖಾತೆ ಸಚಿವ ಎಸ್ ಜೈಶಂಕರ್ ಸ್ಪಷ್ಟನೆ ನೀಡಿದರು.
ಇವರ ಮಾತಿಗೆ ವಿರೋಧ ಪಕ್ಷದ ನಾಯಕರು ಗದ್ದಲವೆಬ್ಬಿಸಿದ ಕಾರಣ  ಕಲಾಪ ಮುಂದೂಡಲಾಗದೆ ಸಭಾಪತಿ ವೆಂಕಯ್ಯ ನಾಯ್ಡು ಮಧ್ಯಾಹ್ನಕ್ಕೆ ಮುಂದೂಡಿದರು.
ಪಾಕಿಸ್ತಾನ ಜೊತೆಗಿನ ಎಲ್ಲಾ ವಿವಾದಗಳನ್ನು ದ್ವಿಪಕ್ಷೀಯ ಮಾತುಕತೆ ಮೂಲಕವೇ ಬಗೆಹರಿಸಬೇಕು, ಗಡಿ ಭಾಗದ ಭಯೋತ್ಪಾದನೆಗೆ ಕೊನೆ ಹಾಡಿದರೆ ಮಾತ್ರ ಕಾಶ್ಮೀರ ವಿವಾದದಲ್ಲಿ ಪಾಕಿಸ್ತಾನ ಜೊತೆ ಮಾತುಕತೆಗೆ ಭಾರತ ಮುಂದು ಎಂದು ಭಾರತ ನಿರಂತರವಾಗಿ ಹೇಳಿಕೊಂಡು ಬಂದಿದೆ ಎಂದು ರಾಜ್ಯಸಭೆಯಲ್ಲಿ ಜೈಶಂಕರ್ ಸ್ಪಷ್ಟನೆ ನೀಡಿದರು.
ಶಿಮ್ಲಾ ಒಪ್ಪಂದ ಮತ್ತು ಲಾಹೋರ್ ಘೋಷಣೆ ಭಾರತ ಮತ್ತು ಪಾಕಿಸ್ತಾನದ ನಡುವೆ ಎಲ್ಲಾ ವಿವಾದಗಳನ್ನು ದ್ವಿಪಕ್ಷೀಯವಾಗಿ ಬಗೆಹರಿಸಲು ಮೂಲವಾಗಿದೆ ಎಂದರು.
ಕಾಶ್ಮೀರ ಸಮಸ್ಯೆಗೆ ಮಧ್ಯಸ್ಥಿಕೆ ವಹಿಸುವಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿಲ್ಲ ಎಂದು ವಿದೇಶಾಂಗ ವ್ಯವಹಾರ ಸಚಿವಾಲಯ ಕೂಡ ಸ್ಪಷ್ಟಪಡಿಸಿದೆ. ಕಾಶ್ಮೀರ ವಿಷಯ ಸೇರಿದಂತೆ ಪಾಕಿಸ್ತಾನದ ಜತೆಗಿನ ಯಾವುದೇ ಸಮಸ್ಯೆಯು ದ್ವಿಪಕ್ಷೀಯವೇ ಎಂಬುದು ಭಾರತದ ನಿಲುವಾಗಿದೆ. ಇದರಲ್ಲಿ ಯಾವುದೇ ಬದಲಾವಣೆ ಇಲ್ಲ. ಕಾಶ್ಮೀರ ವಿಷಯದಲ್ಲಿ ಮೂರನೇ ರಾಷ್ಟ್ರದ ಮಧ್ಯಸ್ಥಿಕೆಗೆ ಜಾಗವಿಲ್ಲ ಎಂದು ವಿದೇಶಾಂಗ ವ್ಯವಹಾರ ಸಚಿವಾಲಯ ವಕ್ತಾರ ರವೀಶ್ ಕುಮಾರ್ ತಿಳಿಸಿದ್ದಾರೆ.
ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿರುವ ಹೇಳಿಕೆಗೆ ಸಂಬಂಧಿಸಿದಂತೆ ಪ್ರಧಾನಿ ಮೋದಿಯವರೇ ಖುದ್ದು ಸ್ಪಷ್ಟನೆ ನೀಡಬೇಕೆಂದು ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಸೇರಿದಂತೆ ವಿರೋಧ ಪಕ್ಷದ ನಾಯಕರು ಒತ್ತಾಯಿಸಿದ್ದಾರೆ. 
ಇಂದಿನ ಗದ್ದಲಕ್ಕೆ ಸಂಬಂಧಿಸಿದಂತೆ ಸಭಾಪತಿ ವೆಂಕಯ್ಯ ನಾಯ್ಡು, ಇದು ದೇಶದ ಹಿತಾಸಕ್ತಿಗೆ ಸಂಬಂಧಿಸಿದ ವಿಷಯ, ದೇಶದ ಏಕತೆ, ಸಮಗ್ರತೆ ಮತ್ತು ಹಿತಾಸಕ್ತಿ ಇಲ್ಲಿ ಮುಖ್ಯವಾಗುತ್ತದೆ. ನಾವಿಲ್ಲಿ ಭಿನ್ನಾಭಿಪ್ರಾಯ ಮರೆತು ಒಗ್ಗಟ್ಟು ತೋರಿಸಬೇಕಿದೆ ಎಂದು ಹೇಳಿದರು. 
ಸದನ ಮತ್ತೆ ಸೇರಿದಾಗ ಪ್ರತಿಪಕ್ಷ ನಾಯಕರು ಈ ಬಗ್ಗೆ ಪ್ರಧಾನಿ ಮೋದಿ ಸ್ಪಷ್ಟನೆ ನೀಡಬೇಕೆಂದು ಮತ್ತೆ ಗದ್ದಲ, ಕೋಲಾಹಲ ನಡೆಸಿದರು. ಕಲಾಪ ಬಿಟ್ಟು ಹೊರನಡೆದರು, ಇದರಿಂದ ಕಲಾಪವನ್ನು ಅಪರಾಹ್ನ 2 ಗಂಟೆಗೆ ಮುಂದೂಡಲಾಯಿತು. 
SCROLL FOR NEXT