ರೈಲಿನಲ್ಲೂ ಇನ್ನು ಮುಂದೆ ಬಯೋಮೆಟ್ರಿಕ್ ವ್ಯವಸ್ಥೆ: ಪ್ರಯಾಣಿಕರಿಗೆ ಇದರಿಂದ ಏನು ಪ್ರಯೋಜನ? ಇಲ್ಲಿದೆ ಮಾಹಿತಿ
ನವದೆಹಲಿ: ರೈಲಿನ ಸಾಮಾನ್ಯ ವಿಭಾಗದಲ್ಲೂ ಇನ್ನು ಮುಂದೆ ಬಯೋಮೆಟ್ರಿಕ್ ವ್ಯವಸ್ಥೆ ಜಾರಿಯಾಗಲಿದ್ದು, ದೀರ್ಘಾವಧಿ ರೈಲು ಪ್ರಯಾಣ ಮಾಡುವವರಿಗೆ ಇದು ಉಪಯೋಗವಾಗಲಿದೆ.
ರೈಲ್ವೆ ಇಲಾಖೆ ದೂರ ಪ್ರಯಾಣ ಮಾಡುವ ರೈಲುಗಳಿಗೆ ಈ ರೀತಿಯ ಬಯೋಮೆಟ್ರಿಕ್ ವ್ಯವಸ್ಥೆಯನ್ನು ಪರೀಕ್ಷೆ ಮಾಡಲಾಗಿದೆ. ಸಾಮಾನ್ಯ ಬೋಗಿಗಳಲ್ಲಿ ಬಯೋಮೆಟ್ರಿಕ್ ವ್ಯವಸ್ಥೆ ಜಾರಿಗೆ ತರುವುದರಿಂದ ಮೊದಲು ಬಂದವರಿಗೆ ಮೊದಲು ಆಸನ ಸಿಗಲಿದೆ.
ಸಾಮಾನ್ಯ ಬೋಗಿಗಳಲ್ಲಿ ಸಂಚರಿಸುವಾಗ ನೂಕು-ನುಗ್ಗಲು ಉಂಟಾಗುವುದು ಸಾಮಾನ್ಯವಾಗಿ ಕಂಡುಬರುವ ದೃಶ್ಯ. ಒಮ್ಮೆ ಬಯೋಮೆಟ್ರಿಕ್ ವ್ಯವಸ್ಥೆ ಜಾರಿಗೊಳಿಸಿದರೆ ಇಂತಹ ಸ್ಥಿತಿಯನ್ನು ಸುಧಕರಣೆ ಮಾಡಬಹುದೆಂಬುದು ರೈಲ್ವೆ ಇಲಾಖೆಯ ಉದ್ದೇಶವಾಗಿದೆ.
ಮುಂಬೈ ನ ಛತ್ರಪತಿ ಶಿವಾಜಿ ಟರ್ಮಿನಸ್ ನಿಂದ ಲಖನೌ ಕೇಂದ್ರದ ವರೆಗೆ ಸಂಚರಿಸುವ ಪುಷ್ಪಕ್ ಎಕ್ಸ್ ಪ್ರೆಸ್ ರೈಲಿನಲ್ಲಿ ಪ್ರಾಯೋಗಿಕವಾಗಿ ಬಯೋಮೆಟ್ರಿಕ್ ವ್ಯವಸ್ಥೆಯನ್ನು ಪರೀಕ್ಷಿಸಲಾಗಿದೆ.
ಯಾವುದೇ ವ್ಯಕ್ತಿ ರೈಲ್ವೆ ನಿಲ್ದಾಣದಲ್ಲಿ ಆಗಮಿಸುತ್ತಿದ್ದಂತೆಯೇ ಬಯೋಮೆಟ್ರಿಕ್ ಯಂತ್ರದ ಮೂಲಕ ತಾವು ತೆರಳುತ್ತಿರುವ ರೈಲಿಗೆ ನೋಂದಣಿ ಮಾಡಿಕೊಳ್ಳಬೇಕಾಗುತ್ತದೆ. ಒಮ್ಮೆ ನೋಂದಣಿ ಮಾಡಿಕೊಂಡರೆ ರೈಲಿನ ಸಾಮಾನ್ಯ ಬೋಗಿಯಲ್ಲಿ ಆ ವ್ಯಕ್ತಿಗೆ ಆಸನ ವ್ಯವಸ್ಥೆಯನ್ನು ಕಾಯ್ದಿರಿಸಲಾಗುತ್ತದೆ. ಈ ರೀತಿ ಬಯೋಮೆಟ್ರಿಕ್ ವ್ಯವಸ್ಥೆ ಜಾರಿಯಾಗುವುದರಿಂದ ಸಾಮಾನ್ಯ ಬೋಗಿಗಳಲ್ಲಿ ಅತಿ ಹೆಚ್ಚಿನ ಜನಸಂದಣಿಯನ್ನೂ ತಡೆಗಟ್ಟಬಹುದಾಗಿದೆ.