ದೇಶ

ನಿಮ್ಮ ಕಣ್ಣಲ್ಲಿ ಕಣ್ಣಿಟ್ಟು ಮಾತನಾಡಬೇಕು ಅನಿಸುತ್ತಿದೆ: ಸದನದಲ್ಲಿ ಅಜಂ ಖಾನ್ ವಿವಾದಾತ್ಮಕ ಹೇಳಿಕೆ

Lingaraj Badiger
ನವದೆಹಲಿ: ವಿವಾದಾತ್ಮಕ ರಾಜಕಾರಣಿ, ಸಮಾಜವಾದಿ ಪಕ್ಷದ ಸಂಸದ ಅಜಂ ಖಾನ್ ಅವರು ಗುರುವಾರ ಲೋಕಸಭೆಯಲ್ಲಿ ಡೆಪ್ಯೂಟಿ ಸ್ಪೀಕರ್ ರಮಾದೇವಿ ಅವರ ಕುರಿತು ಆಕ್ಷೇಪಾರ್ಹ ಹೇಳಿಕೆ ನೀಡುವ ಮೂಲಕ ಪೇಚಿಗೆ ಸಿಲುಕಿಕೊಂಡಿದ್ದಾರೆ.
ಇಂದು ಲೋಕಸಭೆಯಲ್ಲಿ ತ್ರಿವಳಿ ತಲಾಖ್ ಕುರಿತು ಗಂಭೀರ ಚರ್ಚೆ ನಡೆಯುತ್ತಿರುವ ಸಮಯದಲ್ಲಿ ಇತರ ಸದಸ್ಯರ ಗದ್ದಲಕ್ಕೆ ಗಮನಕೊಡದೇ ತಮ್ಮನ್ನು ಉದ್ದೇಶಿಸಿ ಮಾತನಾಡುವಂತೆ ಸ್ಪೀಕರ್ ಅನುಪಸ್ಥಿತಿಯಲ್ಲಿ ಕಲಾಪ ನಡೆಸುತ್ತಿದ್ದ ಬಿಜೆಪಿ ಸಂಸದೆ ರಮಾದೇವಿ ಅವರು ಅಜಂ ಖಾನ್ ಅವರಿಗೆ ಸೂಚಿಸಿದ್ದಾರೆ.
ಈ ವೇಳೆ ರಮಾದೇವಿಯವರನ್ನು ಉದ್ದೇಶಿಸಿ ಮಾತನಾಡಿದ ಅಜಂ ಖಾನ್, ‘ಆಪ್ ಕೀ ಆಂಖೋ ಮೇ ಆಂಖೇ ಡಾಲ್ ಕೇ ಬಾತ್ ಕರ್ ನೇ ಕಾ ಮನ್ ಕರ್ ತಾ ಹೈ’ (ನಿಮ್ಮ ಕಣ್ಣಲ್ಲಿ ಕಣ್ಣನಿಟ್ಟು ಮಾತನಾಡುವ ಬಯಕೆ ಉಂಟಾಗುತ್ತಿದೆ) ಎಂದು ಹೆಳಿದರು.
ಇದಕ್ಕೆ ತಕ್ಷಣ ಪ್ರತಿಕ್ರಿಯಿಸಿದ ಸಭಾಧ್ಯಕ್ಷರ ಪೀಠದಲ್ಲಿದ್ದ ರಮಾದೇವಿ ಅವರು ‘ಇದು ಮಾತನಾಡುವ ರೀತಿ ಅಲ್ಲ, ಮತ್ತು ಈ ಮಾತುಗಳನ್ನು ಕಡತದಿಂದ ತೆಗೆದು ಹಾಕಿ’ ಎಂದು ಸೂಚನೆ ಕೊಟ್ಟರು. ತಕ್ಷಣ ತನ್ನ ತಪ್ಪನ್ನು ಅರ್ಥ ಮಾಡಿಕೊಂಡ ಸಂಸದ ಅಜಂ ಖಾನ್ ‘ನಿಮ್ಮ ಬಗ್ಗೆ ಅಪಾರವಾದ ಗೌರವ ಇದೆ ; ನೀವು ನನ್ನ ಸಹೋದರಿ ಇದ್ದ ಹಾಗೆ’ ಎಂದು ಹೇಳಿ ಪ್ರಕರಣಕ್ಕೆ ತೆರ ಎಳೆಯಲು ಪ್ರಯತ್ನಿಸಿದರು.
ಆದರೆ ಅಜಂ ಖಾನ್ ಅವರ ಈ ಹೇಳಿಕೆ ಬಿಜೆಪಿ ಸಂಸದರನ್ನು ಕೆರಳಿಸಿತು ಮತ್ತು ಸಂಸತ್ ಗದ್ದಲದ ಗೂಡಾಯಿತು. ಆದರೆ ಅಜಂ ಖಾನ್ ಅವರು ಮಾತನಾಡಿ ನಾನು ಯಾವುದೇ ರೀತಿಯಲ್ಲಿ ಅಸಾಂವಿಧಾನಕ ಪದ ಬಳಕೆ ಮಾಡಿಲ್ಲ ಹಾಗೇನಾದರೂ ಮಾಡಿದ್ದಲ್ಲಿ ನನ್ನ ಸಂಸದ ಸ್ಥಾನಕ್ಕೆ ಈಗಲೇ ರಾಜೀನಾಮೆ ಕೊಡುತ್ತೇನೆ ಎಂದು ಹೇಳಿದರು. ಅಜಂ ಖಾನ್ ಅವರನ್ನು ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಅವರೂ ಸಹ ಸಮರ್ಥಿಸಿಕೊಂಡಿದ್ದಾರೆ.
SCROLL FOR NEXT