ದೇಶ

ಉನ್ನಾವೊ ಅತ್ಯಾಚಾರ ಸಂತ್ರಸ್ತೆಯ ಕಾರು ಅಪಘಾತ: ಬಿಜೆಪಿ ಶಾಸಕನ ವಿರುದ್ಧ ಕೊಲೆ ಯತ್ನ ಕೇಸ್ ದಾಖಲು

Lingaraj Badiger
ಲಖನೌ: ಉನ್ನಾವೊ ಅತ್ಯಾಚಾರ ಸಂತ್ರಸ್ತೆ ಹಾಗೂ ಆಕೆಯ ವಕೀಲರು ಪ್ರಯಾಣಿಸುತ್ತಿದ್ದ ಕಾರು ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಅತ್ಯಾಚಾರ ಪ್ರಕರಣದ ಪ್ರಮುಖ ಆರೋಪಿ, ಬಿಜೆಪಿ ಶಾಸಕ ಕುಲದೀಪ್ ಸೆಂಗರ್ ವಿರುದ್ಧ ಕೊಲೆ ಯತ್ನ ಕೇಸ್ ದಾಖಲಿಸಲಾಗಿದೆ.
ಬಿಜೆಪಿ ಶಾಸಕ ಕುಲದೀಪ್‌ ಸೆಂಗರ್‌ ವಿರುದ್ಧ ಅತ್ಯಾಚಾರ ಆರೋಪ ಮಾಡಿದ್ದ ಯುವತಿ, ಆಕೆಯ ವಕೀಲ ಹಾಗೂ ಇಬ್ಬರು ಸಾಕ್ಷಿಗಳು ಪ್ರಯಾಣಿಸುತ್ತಿದ್ದ ಕಾರಿಗೆ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಇಬ್ಬರು ಮೃತಪಟ್ಟಿದ್ದರು.
ರಾಯಬರೇಲಿ ಬಳಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಅತ್ಯಾಚಾರ ಸಂತ್ರಸ್ತೆ ಹಾಗೂ ವಕೀಲರನ್ನು ಕಿಂಗ್ ಜಾರ್ಜ್ ವೈದ್ಯಕೀಯ ವಿಶ್ವವಿದ್ಯಾಲಯ ಆಸ್ಪತ್ರೆ ತೀವ್ರ ನಿಗಾ ಘಟಕದಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತದೆ. ಇಬ್ಬರು ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.
ಈ ಮಧ್ಯೆ ಪ್ರಾಥಮಿಕ ತನಿಖೆಯಲ್ಲಿ ಅದು ಅಪಘಾತ ಎಂದು ತಿಳಿದುಬಂದಿದೆ. ಆದರೂ ಆ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಲ್ಲದೆ ಪ್ರಕರಣವನ್ನು ಸಿಬಿಐಗೆ ವಹಿಸಿಲು ಸಿದ್ಧ ಎಂದು ಉತ್ತರ ಪ್ರದೇಶ ಪೊಲೀಸ್ ಮಹಾ ನಿರ್ದೇಶಕ ಒಪಿ ಸಿಂಗ್ ಅವರು ಹೇಳಿದ್ದಾರೆ.
ಅಪಘಾತದ ಬಳಿಕ, ಇದು ಅಪಘಾತ ಅಲ್ಲ ಅತ್ಯಾಚಾರ ಸಂತ್ರಸ್ತೆಯ ಕೊಲೆಗೆ ಬಿಜೆಪಿ ಸಂಚು ರೂಪಿಸಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಆರೋಪಿಸಿದ್ದರು. ಅಲ್ಲದೆ ಈ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಒತ್ತಾಯಿಸಿದ್ದರು.
ರಾಜಕೀಯವಾಗಿಯೂ ತೀವ್ರ ಆರೋಪ-ಪ್ರತ್ಯಾರೋಪಕ್ಕೆ ಎಡೆಮಾಡಿಕೊಟ್ಟಿದ್ದ ಉನ್ನಾವೊ ಆತ್ಯಾಚಾರ ಪ್ರಕರಣ, ಈಗ ಅಪಘಾತದ ಹಿಂದಿನ ಕೈವಾಡದ ಬಗ್ಗೆ ಹಲವು ಸಂಶಯಗಳಿಗೆ ಆಸ್ಪದ ಮಾಡಿಕೊಟ್ಟಿದೆ. ಇದರೊಂದಿಗೆ ಬಿಜೆಪಿ ಶಾಸಕ ಕುಲದೀಪ್‌ ಸೆಂಗರ್‌ ಆರೋಪಿಯಾಗಿರುವ ಈ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಹೊಸ ತಿರುವು ಲಭಿಸಿದೆ.
SCROLL FOR NEXT