ದೇಶ

ಬಿಜೆಪಿಗೆ ಬ್ರೇಕ್ ಹಾಕಲು 'ದೀದಿಗೆ ಹೇಳಿ' ಅಭಿಯಾನಕ್ಕೆ ಮಮತಾ ಬ್ಯಾನರ್ಜಿ ಚಾಲನೆ

Lingaraj Badiger
ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಪ್ರಭಾವ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಇದಕ್ಕೆ ಬ್ರೇಕ್ ಹಾಕಲು ನಿರ್ಧರಿಸಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಹಾಗೂ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ 'ದೀದಿಗೆ ಹೇಳಿ' ಅಭಿಯಾನಕ್ಕೆ ಸೋಮವಾರ ಚಾಲನೆ ನೀಡಿದ್ದಾರೆ.
ಮಮತಾ ಬ್ಯಾನರ್ಜಿ 2021ರ ವಿಧಾನಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಈ ಹೊಸ ಅಭಿಯಾನ ಆರಂಭಿಸಿದ್ದು, ಈಗಿನಿಂದಲೇ ಮತದಾರರನ್ನು ಸೆಳೆವ, ಮತದಾರರ ಮನದಿಂಗಿತ ಅರಿವ ಅಭಿಯಾನ ಆರಂಭಿಸಿದ್ದಾರೆ. ಆ ಅಭಿಯಾನದ ಹೆಸರು 'ದೀದಿ ಕೆ ಬೊಲೋ' ಅಥವಾ 'ದೀದಿಗೆ ಹೇಳಿ'.
ಇಂದು 'ದೀದಿಗೆ ಹೇಳಿ ಅಭಿಯಾನದ ಈ ವೆಬ್ ಸೈಟ್ ಮತ್ತು ಅದರ ಸಹಾಯವಾಣಿಯನ್ನು ಬಿಡುಗಡೆ ಮಾಡಿದ ಮಮತಾ ಬ್ಯಾನರ್ಜಿ, ರಾಜ್ಯಾದ್ಯಂತ ಪಕ್ಷದ ನಾಯಕರು ಮತ್ತು ಕಾರ್ಯಕರ್ತರು ತಮ್ಮ ಸಮಸ್ಯೆಗಳನ್ನು ನೇರವಾಗಿ ದೀದಿಗೆ ಹೇಳಬಹುದು ಎಂದಿದ್ದಾರೆ.
ಜನರ ನಿರೀಕ್ಷೆಗಳನ್ನು ಅವರ ಬಾಯಿಂದಲೇ ಆಲಿಸುತ್ತೇವೆ. ಜನರು ನಮ್ಮ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ನೇರವಾಗಿ ನಮ್ಮೊಂದಿಗೇ ಮಾತನಾಡಬಹುದು ಎಂದು ಮಮತಾ ಬ್ಯಾನರ್ಜಿ ಹೇಳಿದರು. ಅಲ್ಲದೆ ಮುಂದಿನ 100 ದಿನಗಳಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷದ 1000 ಕ್ಕೂ ಹೆಚ್ಚು ಕಾರ್ಯಕರ್ತರು 10, 000 ಕ್ಕೂ ಹೆಚ್ಚು ಹಳ್ಳಿಗಳಿಗೆ ತೆರಳಿ, ಅಲ್ಲಿ ಜನರ ಸಮಸ್ಯೆಗಳನ್ನು ಆಲಿಸಲಿದ್ದಾರೆ. ಅಲ್ಲೇ ಸಮಯ ಕಳೆದು, ಸಮಸ್ಯೆಗಳನ್ನು ಅರಿಯಲಿದ್ದಾರೆ ಎಂದು ಮಮತಾ ಬ್ಯಾನರ್ಜಿ ತಿಳಿಸಿದರು.
SCROLL FOR NEXT