ದೇಶ

ಅಜಂ ಖಾನ್‌ಗೆ ಸೇರಿದ ಖಾಸಗಿ ವಿವಿ ಮೇಲೆ ಪೊಲೀಸ್ ದಾಳಿ, ಪುತ್ರನ ವಿರುದ್ಧ ಎಫ್ಐಆರ್ ದಾಖಲು

Lingaraj Badiger
ರಾಂಪುರ: ಸಮಾಜವಾದಿ ಪಕ್ಷದ ಸಂಸದ ಮುಹಮ್ಮದ್ ಅಜಂ ಖಾನ್‌ ಅವರಿಗೆ ಸೇರಿದ ಮುಹಮ್ಮದ್ ಅಲಿ ಜೌಹರ್ ವಿಶ್ವವಿದ್ಯಾಲಯದ ಮೇಲೆ ಮಂಗಳವಾರ ಪೊಲೀಸರು ದಾಳಿ ನಡೆಸಿ, ಶೋಧ ನಡೆಸಿದ್ದಾರೆ.
ಅಜಂ ಖಾನ್‌ ಅವರ ಪುತ್ರ ಅಬ್ದುಲ್ಲಾ ಅಜಂ ಖಾನ್ ಅವರ ಪಾಸ್‌ಪೋರ್ಟ್‌ನ ಜನನ ದಿನಾಂಕದಲ್ಲಿ ಕಂಡುಬಂದ ವ್ಯತ್ಯಾಸದ ಕುರಿತು ಎಫ್‌ಐಆರ್ ದಾಖಲಿಸಲಾಗಿದೆ.
ವಿಶ್ವ ಪ್ರಸಿದ್ಧ ರಝಾ ಗ್ರಂಥಾಲಯ ಮತ್ತು ಮದರಸಾ ಅಲಿಯಾದಿಂದ ಕೃತಿಯೊಂದು ನಾಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿ ಜೂನ್ 16ರಂದು ಗಂಜ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಎಫ್ಐಆರ್ ಹಿನ್ನೆಲೆಯಲ್ಲಿ ಈ ದಾಳಿ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ದಾಳಿಯ ವೇಳೆ ಎಸ್‌.ಪಿ. ಸಂಸದರ ಖಾಸಗಿ ವಿಶ್ವವಿದ್ಯಾಲಯದ ಗ್ರಂಥಾಲಯದಿಂದ 2000 ಕದ್ದ ವಿರಳ ಮತ್ತು ಬೆಲೆಬಾಳುವ ಪುಸ್ತಕಗಳು ದೊರೆತಿವೆ ಎಂದು ಮೂಲಗಳು ತಿಳಿಸಿವೆ.
ಆದಾಗ್ಯೂ, ಈ ದಾಳಿ ಹಾಗೂ ವಶಪಡಿಸಿಕೊಂಡ ವಸ್ತುಗಳ ಬಗ್ಗೆ ರಾಂಪುರ ಜಿಲ್ಲಾಡಳಿತ ಇದುವರೆಗೆ ಯಾವುದೇ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿಲ್ಲ.
ಈ ಮಧ್ಯೆ, ಪಾಸ್‌ಪೋರ್ಟ್‌ನಲ್ಲಿ ಜನ್ಮ ದಿನಾಂಕ ನಕಲಿ ಮಾಡಿದ ಆರೋಪದಲ್ಲಿ ಸ್ವರ್ ತಂಡಾ ಕ್ಷೇತ್ರದ ಶಾಸಕ ಅಬ್ದುಲ್ಲಾ ಅಜಂ ಖಾನ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪಾಸ್‌ಪೋರ್ಟ್‌ಗೆ ಸಲ್ಲಿಸಿದ್ದ ವಯಸ್ಸಿನ ದೃಢೀಕರಣ ದಾಖಲೆಯಲ್ಲಿ ವ್ಯತ್ಯಾಸವಿದ್ದ ಬಗ್ಗೆ ಎಫ್‌ಐಆರ್ ದಾಖಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಎಫ್ಐಆರ್ ಪ್ರಕಾರ, ಅಬ್ದುಲ್ಲಾ ಅವರ ಹೈಸ್ಕೂಲ್‌, ಬಿ.ಟೆಕ್‌ ಮತ್ತು ಎಂ.ಟೆಕ್‌ ಅಂಕಪಟ್ಟಿಗಳಲ್ಲಿ ಅವರ ಜನ್ಮ ದಿನಾಂಕ ಜನವರಿ 1, 1993 ರಂದು ನಮೂದಾಗಿದೆ. ಆದರೆ ಪಾಸ್‌ಪೋರ್ಟ್‌ನಲ್ಲಿ ಸೆಪ್ಟಂಬರ್ 30, 1990 ಎಂದು ದಾಖಲಾಗಿದೆ.
ಅಬ್ದುಲ್ಲಾ ವಿರುದ್ಧ ಐಪಿಸಿ ಸೆಕ್ಷನ್ 420, 467, 468, 471ಗಳಡಿ ಮತ್ತು ಉತ್ತರ ಪ್ರದೇಶದ ಮಾಜಿ ಸಚಿವರೊಬ್ಬರ ಪುತ್ರ ಆಕಾಶ್ ಹನಿ ಎಂಬವರ ವಿರುದ್ಧ ಪಾಸ್‌ಪೋರ್ಟ್ ಕಾಯ್ದೆ (12)ಎ1ರಡಿ ಎಫ್ಐಆರ್ ದಾಖಲಿಸಲಾಗಿದೆ.
SCROLL FOR NEXT