ದೇಶ

ಗ್ರಾಹಕ ರಕ್ಷಣೆ ಮಸೂದೆ ಲೋಕಸಭೆಯಲ್ಲಿ ಅಂಗೀಕಾರ

Srinivas Rao BV
ನವದೆಹಲಿ: ಗ್ರಾಹಕರ ಹಿತಾಸಕ್ತಿ ರಕ್ಷಣೆ ಮತ್ತು ಗ್ರಾಹಕರ ವ್ಯಾಜ್ಯಗಳನ್ನು  ನಿಗದಿತ ಸಮಯದಲ್ಲಿ ಮತ್ತು ಪರಿಣಾಮಕಾರಿಯಾಗಿ ಬಗೆಹರಿಸುವುದಕ್ಕೆ ಸಂಸ್ಥೆಗಳನ್ನು  ಸ್ಥಾಪಿಸಲು ಅವಕಾಶ ಮಾಡಿಕೊಡುವ ಗ್ರಾಹಕ ರಕ್ಷಣಾ ಮಸೂದೆ 2019  ಅನ್ನು ಲೋಕಸಭೆ  ಮಂಗಳವಾರ  ಧ್ವನಿ ಮತದಿಂದ ಅಂಗೀಕರಿಸಿತು.
ಸುಮಾರು ಮೂರು ಗಂಟೆಗಳ ಕಾಲ  ನಡೆದ  ಚರ್ಚೆಗೆ ಉತ್ತರಿಸಿದ ಗ್ರಾಹಕ ವ್ಯವಹಾರ ಮತ್ತು ನಾಗರಿಕ ಪೂರೈಕೆ ಸಚಿವ ರಾಮ್  ವಿಲಾಸ್  ಪಾಸ್ವಾನ್ ಅವರು ಸದಸ್ಯರು ವ್ಯಕ್ತಪಡಿಸಿದ ಆತಂಕಗಳನ್ನು ನಿವಾರಿಸಲು  ಯತ್ನಿಸಿದರು. ನಿಯಮಗಳನ್ನು ರೂಪಿಸುವಾಗ ಸದಸ್ಯರು ಪ್ರಸ್ತಾಪಿಸಿರುವ ಹಲವು  ಅಂಶಗಳನ್ನು  ಸೇರಿಸಲಾಗುವುದು ಎಂದು ಭರವಸೆ ನೀಡಿದರು.
ಗ್ರಾಹಕರ ಕುಂದುಕೊರತೆಗಳ  ಪರಿಹಾರ  ಪ್ರಕ್ರಿಯೆಯನ್ನು ಸುಲಭ ಮತ್ತು ವ್ಯಾಜ್ಯ ಮುಕ್ತಗೊಳಿಸುವುದು ಸರ್ಕಾರದ ಉದ್ದೇಶವಾಗಿದೆ.  ಗ್ರಾಹಕ ವೇದಿಕೆಗಳು ಜಿಲ್ಲೆಗಳ ಹಂತದಿಂದ  ರಾಜ್ಯ ಮಟ್ಟದವರೆಗೆ ಮತ್ತು  ರಾಷ್ಟ್ರಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿವೆ. ಈ ವೇದಿಕೆಗಳಿಂದ ತೃಪ್ತರಾಗದ  ಗ್ರಾಹಕರಿಗೆ ನ್ಯಾಯಾಲಯಗಳು ಸಹ ಲಭ್ಯವಿವೆ. ಅಲ್ಲದೆ, ಗ್ರಾಹಕರು  ತಮ್ಮ  ಮೇಲ್ಮನವಿಗಳನ್ನು ಸುಪ್ರೀಂ ಕೋರ್ಟ್ ಗೆ ಸಲ್ಲಿಸಲು ಸಹ ಮುಕ್ತರಾಗಿದ್ದಾರೆ  ಎಂದು  ಸಚಿವರು ಹೇಳಿದರು.ಆರೋಗ್ಯ ಸೌಲಭ್ಯಗಳನ್ನು ಮಸೂದೆಯ ವ್ಯಾಪ್ತಿಗೆ  ಒಳಪಡಿಸದಿರುವ ಬಗ್ಗೆ  ಸದಸ್ಯರು ವ್ಯಕ್ತಪಡಿಸಿದ ಕಳವಳದ ಬಗ್ಗೆ ಮಾತನಾಡಿದ ಪಾಸ್ವಾನ್ ಅವರು, ಇದರಿಂದ  ವೈದ್ಯಕೀಯ  ವೃತ್ತಿಪರರನ್ನು ಗ್ರಾಹಕ ರಕ್ಷಣೆಯ ಕಾನೂನು ಪ್ರಕ್ರಿಯೆಗೆ  ಎಳೆದಂತಾಗುತ್ತದೆ. ಇದು ರೋಗಿಗಳಿಗೆ ಒದಗಿಸಲಾಗುವ ಸೇವೆಗಳ ಮೇಲೆ ಪರಿಣಾಮ ಬೀರಬಹುದು.  ಇಂತಹ ಪ್ರಕರಣಗಳಲ್ಲಿ ನ್ಯಾಯಾಲಯಗಳನ್ನು ಸಂಪರ್ಕಿಸುವ ಮಾರ್ಗ ಈಗಾಗಲೇ  ಲಭ್ಯವಿದೆ ಎಂದು  ಅವರು ಹೇಳಿದರು.
ಬಿಜೆಪಿ  ಸದಸ್ಯ ರಾಜೀವ್ ಪ್ರತಾಪ್ ರೂಡಿ ಮಾತನಾಡಿ, ವಿದ್ಯುತ್  ಪೂರೈಕೆ, ಖಾಸಗಿ ಟೆಲಿಕಾಂ ಕಂಪೆನಿಗಳಿಂದಾಗವ ಕಾಲ್;ಡ್ರಾಪ್(ಕರೆ ಕಡಿತ) ಸಮಸ್ಯೆ ಮತ್ತು  ವಿಮಾನಯಾನ ಸಂಸ್ಥೆಗಳ ಸೇವೆಗಳಲ್ಲಿ ಆಗುವ ವಿಳಂಬದಿಂದ ಗ್ರಾಹಕರು ತೊಂದರೆ  ಎದುರಿಸಬೇಕಾಗುತ್ತದೆ. ಇದರ ಬಗ್ಗೆ ಗಮನಹರಿಸಬೇಕು ಎಂದು ಹೇಳಿದರು.  ಕಾಂಗ್ರೆಸ್  ನಾಯಕ ಶಶಿ ತರೂರ್ ಮಾತನಾಡಿ, ಅನೇಕ  ಕಂಪನಿಗಳಿಗೆ ಮಧ್ಯಸ್ಥಿಕೆ  ಉಪವಾಕ್ಯವಿದ್ದು,  ಇದಕ್ಕೆ ಅನುಮತಿಸಬಾರದು. ಕಂಪೆನಿಗಳು ಸೀಮಿತ  ಹೊಣೆಗಾರಿಕೆ ಉಪವಾಕ್ಯ  ಸಹ ಹೊಂದಿವೆ. ಅಂದರೆ ಗ್ರಾಹಕರನ್ನು ಸಂಪೂರ್ಣವಾಗಿ  ರಕ್ಷಿಸಲಾಗುವುದಿಲ್ಲ ಎಂಬುದಾಗಿದೆ  ಎಂದು ಹೇಳಿದರು. ಅನೇಖ ಸದಸ್ಯರು ಮಂಡಿಸಿದ ತಿದ್ದುಪಡಿಗಳನ್ನು ಸದನ ತಿರಸ್ಕರಿಸಿತು ಮತ್ತು ಕೆಲ ಸದಸ್ಯರು ತಮ್ಮ ತಿದ್ದುಪಡಿಗಳನ್ನು ಮಂಡಿಸದಿರಲು ನಿರ್ಧರಿಸಿದರು
SCROLL FOR NEXT