ಚಂಡೀಗಢ: ಇತ್ತೀಚಿಗಷ್ಟೇ ಪಂಜಾಬ್ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಮಾಜಿ ಕ್ರಿಕೆಟಿಗ ಹಾಗೂ ರಾಜಕಾರಣಿ ನವಜೋತ್ ಸಿಂಗ್ ಸಿಧು ಅವರು ದೆಹಲಿ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿ ನೇಮಕಗೊಳ್ಳುವ ಸಾಧ್ಯತೆ ಇದೆ.
ದೆಹಲಿ ಕಾಂಗ್ರೆಸ್ ಅಧ್ಯಕ್ಷೆಯಾಗಿದ್ದ ಶೀಲಾ ದೀಕ್ಷಿತ್ ಅವರು ಇತ್ತೀಚಿಗೆ ನಿಧನರಾಗಿದ್ದು, ಅವರಿಂದ ತೆರವಾದ ಸ್ಥಾನಕ್ಕೆ ಈಗ ಸಿಧು ಅವರನ್ನು ಆಯ್ಕೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.
ಇನ್ನು ಕೆಲವೇ ತಿಂಗಳಲ್ಲಿ ದೆಹಲಿ ವಿಧಾನಸಭೆಗೆ ಚುನಾವಣೆ ನಡೆಯಲಿದ್ದು, ಬಿಜೆಪಿ ಮತ್ತು ಆಡಳಿರೂಢ ಆಮ್ ಆದ್ಮಿ ಪಾರ್ಟಿ ಈಗಾಗಲೇ ಪ್ರಚಾರ ಆರಂಭಿಸಿವೆ.
ಮೂಲಗಳ ಪ್ರಕಾರ, ಪಂಜಾಬ್ ಮಾಜಿ ಸಚಿವ ಸಿಧು ಅವರು ಇತ್ತೀಚಿಗೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಭೇಟಿ ಮಾಡಿದ್ದು, ಈ ವೇಳೆ ಮಾಜಿ ಕ್ರಿಕೆಟಿಗನಿಗೆ ದೆಹಲಿ ಕಾಂಗ್ರೆಸ್ ಹೊಣೆ ವಹಿಸುವ ಬಗ್ಗೆ ಚರ್ಚೆಯಾಗಿದೆ. ಅಲ್ಲದೆ ಈ ಕುರಿತು ವಿಚಾರ ಮಾಡಲು ಸಿಧು ಸಮಯ ನೀಡಲಾಗಿತ್ತು. ಇದೀಗ ರಾಷ್ಟ್ರ ರಾಜಧಾನಿಯ ಜವಾಬ್ದಾರಿ ವಹಿಸಿಕೊಳ್ಳಲು ಸಿಧು ಸಿದ್ಧರಾಗಿದ್ದಾರೆ ಎನ್ನಲಾಗಿದೆ.