ದೇಶ

'ಜೈಶ್ರೀರಾಮ್' ಧಾರ್ಮಿಕ ಘೋಷಣೆ, ಅದನ್ನು ರಾಜಕೀಯಗೊಳಿಸಬೇಡಿ: ಬಿಜೆಪಿಗೆ ದೀದಿ

Srinivas Rao BV
ಕೋಲ್ಕತ್ತ: ತಾವು ಹೋದಲ್ಲಿ ಬಂದಲ್ಲೆಲ್ಲಾ ಜೈ ಶ್ರೀರಾಮ್ ಘೋಷಣೆ ಕೂಗುವವರಿಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಬ್ಲಾಗ್ ಮೂಲಕ ಸಂದೇಶ ರವಾನಿಸಿದ್ದಾರೆ. 
ಮುಖ್ಯಮಂತ್ರಿಯ ಎದುರು ಜೈ ಶ್ರೀರಾಮ್ ಘೋಷಣೆ ಕೂಗಿದವರನ್ನು ಪಶ್ಚಿಮ ಬಂಗಾಳದಲ್ಲಿ ಬಂಧಿಸಿರುವ ಘಟನೆಯನ್ನು ಖಂಡಿಸಿರುವ ಬಿಜೆಪಿ ಮಮತಾ ಬ್ಯಾನರ್ಜಿ ವಿರುದ್ಧ ಪತ್ರ ಹೋರಾಟಕ್ಕೆ ಇಳಿದಿದ್ದು, ಜೈ ಶ್ರೀರಾಮ್ ಎಂದು ಬರೆದಿರುವ 10 ಲಕ್ಷ ಪೋಸ್ಟ್ ಕಾರ್ಡ್ ಗಳನ್ನು ಕಳಿಸುವುದಾಗಿ ಘೋಷಿಸಿದೆ. 
ಈ ಬೆನ್ನಲ್ಲೇ ಬ್ಲಾಗ್ ಬರೆದಿರುವ ಮಮತಾ ಬ್ಯಾನರ್ಜಿ ಬಿಜೆಪಿಯ ಕೆಲವು ಬೆಂಬಲಿಗರು ನಕಲಿ ವಿಡಿಯೋಗಳನ್ನು ಹಾಗೂ ಸುದ್ದಿಗಳನ್ನು ಹರಡುವುದಕ್ಕೆ ಮಾಧ್ಯಮಗಳನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.  
ಬಿಜೆಪಿ ಪ್ರತಿಭಟನೆಗೆ ಪ್ರತಿಕ್ರಿಯೆ ನೀಡಿರುವ ಮಮತಾ ಬ್ಯಾನರ್ಜಿ, ಬಂಗಾಳ ಎಂದಿಗೂ ರಾಜಾ ರಾಮ್ ಮೋಹನ್ ರಾಯ್, ವಿದ್ಯಾಸಾಗರ್ ರಂತಹ ಸಮಾಜ ಸುಧಾರಕರ ನಾಡು. ಪಶ್ಚಿಮ ಬಂಗಾಳ ರಚನಾತ್ಮಕ ಚಿಂತನೆಗಳು, ಸೌಹಾರ್ದತೆ, ಅಭಿವೃದ್ಧಿಯನ್ನು ಉತ್ತೇಜಿಸಿದೆ. 
ಸಮಾವೇಶಗಳಲ್ಲಿ ರಾಜಕೀಯ ಪಕ್ಷಗಳ ಯಾವುದೇ ಘೋಷಣೆಗಳ ಬಗ್ಗೆ ನನಗೆ ತಕರಾರು ಇಲ್ಲ. ಆದರೆ ಜೈ ಸಿಯಾ ರಾಮ್, ಜೈ ರಾಮ್ ಜಿ ಕೀ, ರಾಮ್ ನಾಮ್ ಸತ್ಯ ಹೈ ಈ ಘೋಷಣೆಗಳು ಧಾರ್ಮಿಕ ಹಾಗೂ ಸಾಮಾಜಿಕ ಸಂಬಂಧ ಹೊಂದಿವೆ. ಈ ಭಾವನೆಗಳನ್ನು ನಾವು ಗೌರವಿಸುತ್ತೇವೆ, ಆದರೆ ಜೈ ಶ್ರೀರಾಮ್ ಘೋಷಣೆಯನ್ನು ಬಿಜೆಪಿ ರಾಜಕೀಯವಾಗಿ ಬಳಕೆ ಮಾಡುತ್ತಿದ್ದು, ಧಾರ್ಮಿಕತೆಯನ್ನು ರಾಜಕೀಯದೊಂದಿಗೆ ತಳುಕು ಹಾಕುತ್ತಿದೆ. ಇದು ವಿಧ್ವಂಸಕತೆ ಮತ್ತು ಹಿಂಸೆಯ ಮೂಲಕ ದ್ವೇಷವನ್ನು ಹರಡುವ ಸ್ಪಷ್ಟ ಉದ್ದೇಶ ಎಂದು ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.
SCROLL FOR NEXT