ದೇಶ

ನಾಪತ್ತೆಯಾದ ವಾಯುಪಡೆಯ ಎಎನ್-32 ವಿಮಾನದ ಅವಶೇಷಗಳು ಪತ್ತೆಯಾಗಿಲ್ಲ: ಐಎಎಫ್

Lingaraj Badiger
ಗುಹವಾಟಿ: ಎಂಟು ಸಿಬ್ಬಂದಿ ಹಾಗೂ ಐದು ಪ್ರಯಾಣಿಕರಿದ್ದ ಭಾರತೀಯ ವಾಯುಪಡೆಯ ವಿಮಾನವೊಂದು ನಾಪತ್ತೆಯಾಗಿದ್ದು, ಅದರ ಅವಶೇಷಗಳು ಇನ್ನು ಪತ್ತೆಯಾಗಿಲ್ಲ ಎಂದು ಸೋಮವಾರ ಭಾರತೀಯ ವಾಯುಪಡೆ(ಐಎಎಫ್) ಸ್ಪಷ್ಟಪಡಿಸಿದೆ.
ಇಂದು ಮಧ್ಯಾಹ್ನ 1 ಗಂಟೆಯ ಸುಮಾರಿಗೆ ಅಸ್ಸಾಂ ನ ಜೊರ್ಹತ್ ಏರ್ ಬೇಸ್ ನಿಂದ ಟೇಕ್ ಆಫ್ ಆಗಿದ್ದ ಭಾರತೀಯ ವಾಯುಪಡೆಯ ಎಎನ್-32 ವಿಮಾನ, ಇದುವರೆಗೂ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ವರದಿಗಳು ತಿಳಿಸಿವೆ.
ಒಟ್ಟು 13 ಜನರನ್ನು ಹೊತ್ತ ವಿಮಾನ ಮಧ್ಯಾಹ್ನ 1 ಗಂಟೆ ಗೆ ಟೇಕ್ ಆಫ್ ಆಗಿತ್ತು. ಅರುಣಾಚಲ ಪ್ರದೇಶದ ಮೆಂಚುಕಾ ಏರ್ ಫೀಲ್ಡ್ ನಲ್ಲಿ ಲ್ಯಾಂಡ್ ಆಗಬೇಕಾಗಿತ್ತು. ಆದರೆ ವಿಮಾನ ಅರುಣಾಚಲ ಪ್ರದೇಶ ತಲುಪಿಲ್ಲ. ವಿಮಾನ ಪತ್ತೆಗೆ ಎಲ್ಲ ಮೂಲಗಳಿಂದ ಪ್ರಯತ್ನ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಮಧ್ಯ, ನಾಪತ್ತೆಯಾದ ವಿಮಾನ ಪತನವಾಗಿದ್ದು, ಅದರ ಅವಶೇಷಗಳು ಅರುಣಾಚಲ ಪ್ರದೇಶದ ಪಾಯುಮ್​ ಗ್ರಾಮದ ಬಳಿ ಪತ್ತೆಯಾಗಿವೆ ಎಂಬ ವರದಿಗಳನ್ನು ಭಾರತೀಯ ವಾಯುಪಡೆ ಸ್ಪಷ್ಟವಾಗಿ ತಳ್ಳಿಹಾಕಿದೆ.
ವಿಮಾನ ಪತನವಾಗಿರುವ ಸ್ಥಳದ ಬಗ್ಗೆ ಕೆಲವು ವರದಿಗಳು ಬರುತ್ತಿವೆ. ಆದರೆ ಅಲ್ಲಿ ಯಾವುದೇ ಅವಶೇಷಗಳು ಪತ್ತೆಯಾಗಿಲ್ಲ ಎಂದು ಐಎಎಫ್ ಟ್ವೀಟ್ ಮಾಡಿದೆ.
ನಾಪತ್ತೆಯಾದ ವಿಮಾನ ಶೋಧಕ್ಕಾಗಿ ನಾವು ನಿರಂತರ ಪ್ರಯತ್ನ ನಡೆಸುತ್ತಿದ್ದು, ಈ ಕುರಿತು ಭಾರತೀಯ ವಾಯುಪಡೆಯ ಉಪಮುಖ್ಯಸ್ಥರ ಜೊತೆ ಮಾತುಕತೆ ನಡೆಸಲಾಗಿದೆ ಎಂದು ನೂತನ ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ಅವರು ಟ್ವೀಟ್​ ಮಾಡಿದ್ದಾರೆ.
SCROLL FOR NEXT