ದೇಶ

ಬಿಜೆಪಿ ಜೊತೆ ಮುನಿಸಿಕೊಂಡ ನಿತೀಶ್ ಗೆ ಮತ್ತೆ 'ಮಹಾಘಟ್ ಬಂಧನ್' ನಿಂದ ಆಹ್ವಾನ!

Srinivasamurthy VN
ಪಾಟ್ನಾ: ಎನ್ ಡಿಎ ಮೈತ್ರಿಕೂಟದಲ್ಲಿ ಗುರುತಿಸಿಕೊಂಡಿದ್ದ ಬಿಹಾರದ ಸಿಎಂ ನಿತೀಶ್ ಕುಮಾರ್ ಅವರ ಜೆಡಿಯು ಪಕ್ಷ 'ಮಹಾಘಟ್ ಬಂಧನ್' ಸೇರುವಂತೆ ಲಾಲು ಪ್ರಸಾದ್ ಯಾದವ್ ಅವರ ನೇತೃತ್ವ ಆರ್ ಜೆಡಿ ಪಕ್ಷ ಅಧಿಕೃತ ಆಹ್ವಾನ ನೀಡಿದೆ.
ಲೋಕಸಭಾ ಚುನಾವಣೆ ಬಳಿಕ ನಡೆದ ಸರ್ಕಾರ ರಚನೆ ಮತ್ತು ಸಂಪುಟ ರಚನೆ ವೇಳೆ ಬಿಜೆಪಿ ವಿರುದ್ಧ ಮುನಿಸಿಕೊಂಡಿದ್ದ ಜೆಡಿಯು ನಾಯಕ ನಿತೀಶ್ ಕುಮಾರ್ ಅವರು ತಮಗೆ ಕೇಂದ್ರದಲ್ಲಿ ಯಾವುದೇ ಸಚಿವ ಸ್ಥಾನ ಬೇಡ ಎಂದು ಹೇಳುವ ಮೂಲಕ ಬಹಿರಂಗವಾಗಿಯೇ ಮುನಿಸು ತೋರ್ಪಡಿಸಿದ್ದರು. ಇದೀಗ ಇದೇ ವಿಚಾರವನ್ನು ತಮ್ಮ ಲಾಭಕ್ಕೆ ಉಪಯೋಗಿಸಿಕೊಳ್ಳಲು ಆರ್ ಜೆಡಿ ಪಕ್ಷ ಮುಂದಾಗಿದ್ದು, ನಿತೀಶ್ ಕುಮಾರ್ ಅವರಿಗೆ ಮಹಾಘಟ್ ಬಂಧನ್ ಸೇರುವಂತೆ ಅಧಿಕೃತವಾಗಿ ಆಹ್ವಾನ ನೀಡಲಾಗಿದೆ.
ಆರ್ ಜೆಡಿ ಪಕ್ಷದ ಉಪಾಧ್ಯಕ್ಷ ರಘುವಂಶ್ ಪ್ರಸಾದ್ ಸಿಂಗ್ ಅವರು ಸೋಮವಾರ ನಿತೀಶ್ ಕುಮಾರ್ ಅವರಿಗೆ ಈ ಆಹ್ವಾನ ನೀಡಿದ್ದಾರೆ ಎನ್ನಲಾಗಿದೆ. ಬಿಜೆಪಿಯಲ್ಲಿ ನಿತೀಶ್ ಕುಮಾರ್ ಅವರಿಗೆ ಅಪಮಾನವಾಗಿದ್ದು, ಎನ್ ಡಿಎ ಮೈತ್ರಿಕೂಟ ಅವರನ್ನು ಮೂಲೆಗುಂಪು ಮಾಡಿದೆ. ಈ ಹಿಂದೆಯೂ ಕೂಡ ಬಿಜೆಪಿ ತನ್ನ ಮಿತ್ರ ಪಕ್ಷಗಳನ್ನು ಕಡೆಗಣಿಸಿದ್ದು, ಇದೇ ಕಾರಣಕ್ಕೆ ಹಲವು ಮೈತ್ರಿ ಪಕ್ಷಗಳು ಬಿಜೆಪಿ ವಿರುದ್ಧ ಅಸಮಾಧಾನಗೊಂಡಿವೆ ಎಂದು 
ಅವರು ಹೇಳಿದ್ದಾರೆ.
ಈ  ಹಿಂದೆ ಲೋಕಸಭಾ ಚುನಾವಣೆ ಬಳಿಕ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಮೈತ್ರಿ ಕೂಟ ತನ್ನ ಎಲ್ಲ ಮಿತ್ರಪಕ್ಷಗಳಿಗೂ ತಲಾ ಒಂದೊಂದು ಸಚಿವ ಸ್ಥಾನ ನೀಡುವುದಾಗಿ ಘೋಷಣೆ ಮಾಡಿತ್ತು. ಅದರಂತೆ ಜೆಡಿಯುಗೂ ಸರ್ಕಾರದಲ್ಲಿ ಪಾಲ್ಗೊಳ್ಳುವಂತೆ ಆಹ್ವಾನ ನೀಡಿತ್ತು. ಆದರೆ ನಿತೀಶ್ ಕುಮಾರ್ ಇದನ್ನು ತಿರಸ್ಕರಿಸಿದ್ದರು. ಆ ಮೂಲಕ ಬಿಜೆಪಿ ವಿರುದ್ಧ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದರು.
SCROLL FOR NEXT