ದೇಶ

ಕಾಶ್ಮೀರದಲ್ಲಿ ಕ್ಷೇತ್ರ ಮರುವಿಂಗಡಣೆಗೆ ಮುಂದಾದ ಕೇಂದ್ರ, ಅಮಿತ್ ಶಾರಿಂದ ಮಹತ್ವದ ಸಭೆ

Lingaraj Badiger
ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ದೀರ್ಘಕಾಲದಿಂದ ಬಾಕಿ ಉಳಿದಿರುವ ವಿಧಾಸಭಾ ಕ್ಷೇತ್ರಗಳ ಮರು ವಿಂಗಡಣೆಗೆ ಕೇಂದ್ರ ಸರ್ಕಾರ ಮುಂದಾಗಿದ್ದು, ಈ ಸಂಬಂಧ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಂಗಳವಾರ ಮಹತ್ವದ ಸಭೆ ನಡೆಸಿದರು.
ಇಂದು ನಡೆದ ಉನ್ನತ ಮಟ್ಟದ ಸಭೆಯಲ್ಲಿ ಕಣಿವೆ ರಾಜ್ಯದಲ್ಲಿ ಕ್ಷೇತ್ರ ಮರು ವಿಂಗಡಣೆಗೆ ಇರುವ ನಿರ್ಬಂಧವನ್ನು ರದ್ದುಪಡಿಸುವ ಕುರಿತು ಚರ್ಚಿಸಲಾಯಿತು. ಸಭೆಯಲ್ಲಿ ಜಮ್ಮು ಮತ್ತು ಕಾಶ್ಮೀರ ರಾಜ್ಯಪಾಲ ಸತ್ಯಪಾಲ್ ಮಲಿಕ್, ಗುಪ್ತಚರ ಇಲಾಖೆ ನಿರ್ದೇಶಕ ರಾಜೀವ್ ಜೈನ್ ಹಾಗೂ ಗೃಹ ಕಾರ್ಯದರ್ಶಿ ರಾಜೀವ್ ಗೌಭ ಅವರು ಪಾಲ್ಗೊಂಡಿದ್ದರು.
ಪ್ರಸ್ತುತ ಇರುವ ವಿಧಾನಸಭಾ ಕ್ಷೇತ್ರಗಳ ಪ್ರಾತಿನಿಧ್ಯಗಳು ಸಮರ್ಪಕವಾಗಿಲ್ಲ. ಜಮ್ಮು ಪ್ರಾಂತ್ಯಕ್ಕೆ ಕಡಿಮೆ ಪ್ರಾತಿನಿಧ್ಯವಿದ್ದು, ಕಾಶ್ಮೀರ ಪ್ರಾಂತ್ಯವೇ 46 ಕ್ಷೇತ್ರಗಳೊಂದಿಗೆ ಹೆಚ್ಚಿನ ಪ್ರಾತಿನಿಧ್ಯ ಹೊಂದಿದೆ. ಜಮ್ಮುವಿನ ಪ್ರಾತಿನಿಧ್ಯ ಹೆಚ್ಚಿಸಲು ಕ್ಷೇತ್ರಗಳ ಮರುವಿಂಗಡಣೆಗೆ ಚಿಂತನೆ ನಡೆಸಲಾಗಿದೆ ಎನ್ನಲಾಗುತ್ತಿದೆ.
ಕ್ಷೇತ್ರ ಮರುವಿಂಗಡಣಾ ಆಯೋಗ ರಚಿಸಲು ಸಿದ್ಧತೆ ನಡೆಸಿರುವ ಕೇಂದ್ರ ಸರ್ಕಾರ ಜನಸಂಖ್ಯಾ ಬಾಹುಳ್ಯ ಆಧರಿಸಿ ಕಾಶ್ಮೀರಕ್ಕಿಂತ ಹೆಚ್ಚಿನ ಸ್ಥಾನಗಳನ್ನು ಜಮ್ಮುವಿನಲ್ಲಿ ಸೃಷ್ಟಿಸುವ ಉದ್ದೇಶ ಹೊಂದಿದೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಶೇ. 11ರಷ್ಟು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿದ್ದಾರೆ. ಆದರೆ ಅವರಿಗೆ ರಾಜಕೀಯ ಮೀಸಲಾತಿ ಇಲ್ಲ. ಹೀಗಾಗಿ ಜಮ್ಮು ಮತ್ತು ಕಾಶ್ಮೀರದಲ್ಲಿ ಎಸ್‌ಸಿ/ಎಸ್‌ಟಿ ಸಮುದಾಯಕ್ಕೆ ಹೆಚ್ಚಿನ ಪ್ರಾತಿನಿಧ್ಯ ಒದಗಿಸಲು ಕ್ಷೇತ್ರ ಮರುವಿಂಗಡಣೆ ಮಾಡುವ ಪ್ರಸ್ತಾಪವನ್ನು ಸಭೆಯಲ್ಲಿ ಮಂಡಿಸಲಾಗಿದೆ ಎನ್ನಲಾಗಿದೆ.
ಪ್ರಸ್ತುತ ಕಾಶ್ಮೀರ ವಿಧಾನಸಭೆಯಲ್ಲಿ ಒಟ್ಟು 87 ಸ್ಥಾನಗಳಿದ್ದು, ಜಮ್ಮುವಿನಲ್ಲಿ 37, ಕಾಶ್ಮೀರದಲ್ಲಿ 46 ಹಾಗೂ ಲಡಾಖ್‌ನಲ್ಲಿ ನಾಲ್ಕು ಸ್ಥಾನಗಳಿವೆ.
SCROLL FOR NEXT