ದೇಶ

ಲೋಕಸಭಾ ಚುನಾವಣೆಯಲ್ಲಿ ಹೀನಾಯ ಸೋಲು, ಮೌನಕ್ಕೆ ಶರಣಾಗಿರುವ ರಾಹುಲ್ ಗಾಂಧಿ, ಅವ್ಯವಸ್ಥೆಯಲ್ಲಿ ಕಾಂಗ್ರೆಸ್

Sumana Upadhyaya
ನವದೆಹಲಿ: ಲೋಕಸಭಾ ಚುನಾವಣಾ ಫಲಿತಾಂಶ ಪ್ರಕಟವಾಗಿ 10 ದಿನಗಳೇ ಕಳೆದಿದೆ. ಹೀನಾಯ ಸೋಲು ಕಂಡ ಕಾಂಗ್ರೆಸ್ ನ ಪರಿಸ್ಥಿತಿ ಮಾತ್ರ ಇನ್ನೂ ಅವ್ಯವಸ್ಥೆಯಾಗಿಯೇ ಉಳಿದಿದೆ.
ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಹುಲ್ ಗಾಂಧಿ ರಾಜೀನಾಮೆ ವಿಚಾರ ಇನ್ನೂ ಕುತೂಹಲವಾಗಿಯೇ ಉಳಿದಿದ್ದು ಪಕ್ಷದ ಕಾರ್ಯಕಾರಿಣಿ ಮತ್ತು ರಾಜ್ಯ ಘಟಕಗಳು ಇನ್ನೂ ಅನಿಶ್ಚಿತ ಸ್ಥಿತಿಯಲ್ಲಿವೆ.
ಮೇ 23ರಂದು ಲೋಕಸಭಾ ಚುನಾವಣೆ ಫಲಿತಾಂಶ ಪ್ರಕಟವಾದ ನಂತರ ದೆಹಲಿಯ ಅಕ್ಬರ್ ರಸ್ತೆಯಲ್ಲಿರುವ ಕಾಂಗ್ರೆಸ್ ಕೇಂದ್ರ ಕಚೇರಿ ಮುಂದೆ ನೀರವ ಮೌನ. ಕೆಲವು ಹಿರಿಯ ನಾಯಕರು ಮತ್ತು ಪಕ್ಷದ ಮುಖ್ಯಸ್ಥರು ಕಚೇರಿಗೆ ಬರುತ್ತಿಲ್ಲ, ಹೊರಗಿನಿಂದಲೇ ತಮ್ಮ ದಿನನಿತ್ಯದ ಕೆಲಸಗಳನ್ನು ಮಾಡುತ್ತಿದ್ದಾರೆ.
ದಿನನಿತ್ಯ ಬರುವವರಿಗೆ ಕೂಡ ತಮ್ಮ ಭವಿಷ್ಯದಲ್ಲಿ ಏನು ಮಾಡಬೇಕೆಂದು ದಿಕ್ಕು ತೋಚುತ್ತಿಲ್ಲ.
ಪ್ರತಿಯೊಬ್ಬರೂ ಇಲ್ಲಿ ಒಂಥರಾ ಜಡನಿದ್ದೆಯಲ್ಲಿರುವಂತೆ ಇದ್ದಾರೆ. ಇದು ಇನ್ನು ಕೆಲ ದಿನಗಳವರೆಗೆ ಮುಂದುವರಿಯಬಹುದು. ಸದ್ಯದ ಮಟ್ಟಿಗೆ ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿಯವರ ಬಗ್ಗೆ ಏನೂ ಗೊತ್ತಿಲ್ಲ. ಕಾಂಗ್ರೆಸ್ ಕಾರ್ಯಕಾರಿಣಿ ಅವರ ರಾಜೀನಾಮೆ ಪ್ರಸ್ತಾಪವನ್ನು ತಿರಸ್ಕರಿಸಿದೆ ಎಂದಷ್ಟೇ ನಮಗೆ ಗೊತ್ತಿದೆ ಎಂದರು ಪಕ್ಷದ ಕಾರ್ಯದರ್ಶಿಯೊಬ್ಬರು.
ಲೋಕಸಭಾ ಚುನಾವಣೆ ನಂತರ ತಾವು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದು ಗಾಂಧಿಯೇತರ ನಾಯಕರನ್ನು ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಮಾಡಿ ಎಂಬ ರಾಹುಲ್ ಗಾಂಧಿಯವರ ಒತ್ತಾಯದ ನಂತರ ಗಾಂಧಿಯೇತರ ನಾಯಕರು ಅಧ್ಯಕ್ಷರಾದರೆ ಅವರ ನಾಯಕತ್ವದಡಿಯಲ್ಲಿ ಕಾಂಗ್ರೆಸ್ ನಲ್ಲಿ ಒಗ್ಗಟ್ಟಿನಿಂದ ಕೆಲಸ ಮಾಡಲು ಸಾಧ್ಯವೇ ಎಂಬ ಸಂಶಯ ಮೂಡಲಾರಂಭಿಸಿದೆ.
ರಾಹುಲ್ ಗಾಂಧಿಯವರೇ ಕಾಂಗ್ರೆಸ್ ಅಧ್ಯಕ್ಷರಾಗಿ ಮುಂದುವರಿಯಲಿ ಎಂದು ಹಲವರು ಒತ್ತಾಯಿಸಿದ್ದರು, ಆದರೆ ರಾಹುಲ್ ಗಾಂಧಿ ಮಾತ್ರ ಸುಮ್ಮನಾಗಿದ್ದಾರೆ.
ಪಾರ್ಟಿ ಹೈಕಮಾಂಡ್ ನ ಆದೇಶಕ್ಕೆ ನಾವು ಕಾಯುತ್ತಿದ್ದೇವೆ. ಎಲ್ಲಾ ರಾಜ್ಯದ ಘಟಕಗಳು ಕೂಡ ಹೈಕಮಾಂಡ್ ನ ಆದೇಶಕ್ಕಾಗಿ ಕಾಯುತ್ತಿವೆ, ಇದೇ ಸಂದರ್ಭದಲ್ಲಿ ಹಲವು ರಾಜ್ಯ ಘಟಕದ ಕಾಂಗ್ರೆಸ್ ಮುಖ್ಯಸ್ಥರು ಮತ್ತು ಮುಖ್ಯಸ್ಥರು ಬದಲಾಗುವ ಸಾಧ್ಯತೆಯಿದೆ. ಸದ್ಯದ ಮಟ್ಟಿಗೆ ಕಾದು ನೋಡುತ್ತೇವೆ ಎಂದು ಪಕ್ಷದ ನಾಯಕರೊಬ್ಬರು ಹೇಳಿದ್ದಾರೆ.
SCROLL FOR NEXT