ದೇಶ

ಆಂಧ್ರದಲ್ಲಿ ಜಗನ್ ಭರ್ಜರಿ ಗೆಲುವಿಗೆ ಕಾರಣರಾದ ಪ್ರಶಾಂತ್ ಕಿಶೋರ್ ರಿಂದ ದೀದಿ ಗೆಲುವಿಗೆ ತಂತ್ರ

Lingaraj Badiger
ಕೋಲ್ಕತಾ: ಆಂಧ್ರ ಪ್ರದೇಶದಲ್ಲಿ ಜಗನ್ ಮೋಹನ್ ರೆಡ್ಡಿ ನೇತೃತ್ವದ  ವೈಎಸ್ ಆರ್ ಕಾಂಗ್ರೆಸ್ ನ ಭರ್ಜರಿಗೆ ಗೆಲುವಿನ ಹಿಂದಿನ ಶಕ್ತಿ, ಚುನಾವಣಾ ಚಾಣಾಕ್ಯ ಪ್ರಶಾಂತ್​ ಕಿಶೋರ್​ ಅವರು ಈಗ ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಗೆಲುವಿಗಾಗಿ ತಂತ್ರ ರೂಪಿಸಲಿದ್ದಾರೆ ಎನ್ನಲಾಗಿದೆ.
2014ರಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಹಾರದಲ್ಲಿ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ್ದ ಪ್ರಶಾಂತ್ ಕಿಶೋರ್ ಅವರು ಗುರುವಾರ ಮಮತಾ ಬ್ಯಾನರ್ಜಿ ಅವರನ್ನು ಭೇಟಿ ಮಾಡಿದ್ದು, 2020ರಲ್ಲಿ ನಡೆಯುವ ಪಶ್ಚಿಮ ಬಂಗಾಳ ವಿಧಾಸಭೆ ಚುನಾವಣೆಯಲ್ಲಿ ದೀದಿ ಜತೆ ಕೆಲಸ ಮಾಡಲು ಒಪ್ಪಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪ್ರಶಾಂತ್ ಕಿಶೋರ್ ಅವರು ಇಂದು ತೃಣಮೂಲ ಕಾಂಗ್ರೆಸ್​ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರೊಂದಿಗೆ ಸುಮಾರು ಎರಡು ಗಂಟೆಗಳ ಕಾಲ ವಿಧಾನಸಭೆ ಚುನಾವಣೆಯ ತಂತ್ರಗಾರಿಕೆ ಕುರಿತು ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.
ಸಭೆಯ ಬಳಿಕ ಬ್ಯಾನರ್ಜಿ ಅವರು ಕಿಶೋರ್ ಅವರ ಸೇವೆ ಬಳಸಿಕೊಳ್ಳಲು ಸಹಿ ಮಾಡಿದ್ದಾರೆ ಎಂದು ಮೂಲಗಳು ಖಚಿತಪಡಿಸಿವೆ.
ಇತ್ತೀಚಿಗೆ ಲೋಕಸಭೆ ಚುನಾವಣೆಯೊಂದಿಗೆ ನಡೆದ ಆಂಧ್ರ ಪ್ರದೇಶ ವಿಧಾಸಭೆ ಚುನಾವಣೆಯಲ್ಲಿ ವೈಎಸ್ ಆರ್ ಕಾಂಗ್ರೆಸ್ ಪರವಾಗಿ ಕೆಲಸ ಮಾಡಿದ ಪ್ರಶಾಂತ್ ಕಿಶೋರ್ ಅವರು ಜಗನ್ ​ಮೋಹನ್ ರೆಡ್ಡಿ ಭರ್ಜರಿ ಬಹುಮತ ಗಳಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು.
ಜಗನ್​ ಗೆಲುವಿಗಾಗಿ ಪ್ರಶಾಂತ್ ಕಿಶೋರ್​ ಎರಡು ವರ್ಷಗಳಿಂದ ಸಂಘಟನಾತ್ಮಕವಾಗಿ ಕೆಲಸ ಮಾಡಿದ್ದರು.
SCROLL FOR NEXT